
ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಾಕನೂರ ಎಸ್‌ಬಿಐ ಬ್ಯಾಂಕ್ ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಇಬ್ಬರನ್ನು ಬಂಧಿಸಲಾಗಿದ್ದು, 30 ಗ್ರಾಂ ಬಂಗಾರ, 1.25 ಲಕ್ಷ ನಗದು, ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್, ಪ್ರಕರಣದಲ್ಲಿ ಆರೋಪಿಗಳು ಯಾವುದೇ ಸುಳಿವನ್ನು ಬಿಟ್ಟಿರಲಿಲ್ಲ. ಆದರೂ, ಪೊಲೀಸರು ಸತತವಾಗಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಮಹಾರಾಷ್ಟ್ರದ ನಯಗಾಂವದ ಅಕ್ಷಯ ಅಂಬೋರೆ, ಕುನಾಲ್ ಚವ್ಹಾಣ ಬಂಧಿಸಲಾಗಿದ್ದು, ಅವರಿಂದ ಕಳ್ಳತನಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್, ಸಿಲಿಂಡರ್, ಕಬ್ಬಿಣದ ರಾಡು ವಶಪಡಿಸಿಕೊಳ್ಳಲಾಗಿದೆ.
ತೆಲಂಗಾಣ ರಾಜ್ಯದ ರಾಯಪರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ್ದ ಎಸ್‌ಬಿಐ ಬ್ಯಾಂಕ್ ಕಳ್ಳತನವನ್ನೂ ಮಾಡಿದ್ದು ಪತ್ತೆಯಾಗಿದೆ. ಅಲ್ಲಿ ಕಳ್ಳತನವಾಗಿದ್ದ 244 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಮಾಡಲಾಗಿದೆ.
ಇದಕ್ಕೂ ಮೊದಲು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಹಮ್ಮದ್ ನವಾಬ್, ಖಮರುಲ್ಲಾ ಖಾನ್ ಬಂಧಿಸಲಾಗಿದೆ.
ಘಟನೆ ವಿವರ: ಆರು ಜನರ ತಂಡವು ಕಳ್ಳತನ ಮಾಡುವ ಆರು ತಿಂಗಳು ಮೊದಲೇ ಕಾಕನೂರಿನ ಎಸ್‌ಬಿಐ ಬ್ಯಾಂಕ್ ವೀಕ್ಷಿಸಿ, ಹೇಗೆ ಕಳ್ಳತನ ಮಾಡಬಹುದು ಎಂದು ನೋಡಿಕೊಂಡು ಹೋಗಿದ್ದರು.
ಯೋಜನೆಯಂತೆ ಕಾರಿನಲ್ಲಿ ಬಂದಿದ್ದ ಆರೋಪಿಗಳು 200 ಮೀಟರ್ ದೂರದಲ್ಲಿಯೇ ರಾತ್ರಿ 10ರ ಸುಮಾರಿಗೆ ಕಾರಿನಿಂದ ಇಳಿದು, ಚಾಲಕನಿಗೆ ಬೆಳಗಿನ ಜಾವ ನಾಲ್ಕಕ್ಕೆ ಬರಲು ತಿಳಿಸಿದ್ದರು. 11ರ ಸುಮಾರಿಗೆ ಬ್ಯಾಂಕಿಗೆ ಬಂದ ಆರೋಪಿಗಳು, ಹಿಂಭಾಗದಲ್ಲಿದ್ದ ಶೆಟರ್ ಮುರಿಗು ಒಳಪ್ರವೇಶಿಸಿದ್ದರು.
ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣ ಬಳಿದು ರೆಕಾರ್ಡ್ ಆಗದಂತೆ ಮಾಡಿದ್ದರು. ನಂತರ ಬ್ಯಾಂಕಿನಲ್ಲಿದ್ದ ಮಿನಿ ಲಾಕರ್‌ವೊಂದನ್ನು ಒಡೆದಿದ್ದರು. ನಂತರ ಇನ್ನೊಂದು ದೊಡ್ಡ ಲಾಕರ್ ಒಡೆದು, ಅದರಲ್ಲಿದ್ದ ಬಂಗಾರ, ಬೇರೆಡೆ ಇದ್ದ ನಗದು ಒಟ್ಟು ₹44 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಸಮಯವಾಗಿದ್ದರಿಂದ ಇನ್ನೆರಡು ಲಾಕರ್‌ಗಳನ್ನು ಹಾಗೆಯೇ ಬಿಟ್ಟು ಹೋಗಿದ್ದರು. ₹32 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫಿಂಗರ್ ಪ್ರಿಂಟ್, ವಾಹನದ ಚಲನವಲನ ಗೊತ್ತಾಗದ್ದರಿಂದ ಪ್ರಕರಣ ಕಗ್ಗಂಟಾಗಿತ್ತು. ಬೇರೆಡೆ ನಡೆದ ಬ್ಯಾಂಕ್ ಕಳ್ಳತನ, ಅದಕ್ಕೆ ಸಂಬಂಧಿಸಿದ ಆರೋಪಿಗಳ ವಿಚಾರಣೆ ನಡೆಸುತ್ತಾ ಹೋದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಪಿಎಸ್‌ಐ ವಿಜಯಕುಮಾರ ರಾಠೋಡ, ಬಿ.ಎಂ. ರಬಕವಿ, ಎಚ್.ಕೆ. ನೇರಳೆ, ಸಿದ್ದಪ್ಪ ಯಡಹಳ್ಳಿ, ಎಎಸ್‌ಐ ಸಿ.ಎಂ. ಕುಂಬಾರ, ಅಶೋಕ ಚವ್ಹಾಣ, ಎಂ.ಎಂ. ಸೊಲ್ಲಾಪುರ, ಆನಂದ ಗೋಳಪ್ಪನವರ, ರಾಜು ಒಡೆಯರ, ಬಿ.ಎ. ವಾಲಿಕಾರ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.