ರಾಂಪುರ: ಸಂಪೂರ್ಣ ಹದಗೆಟ್ಟು ವಾಹನಗಳ ಓಡಾಟ ದುಸ್ತರವಾಗಿರುವ ಆಲಮಟ್ಟಿ ರಸ್ತೆ ಸುಧಾರಣೆ ಮಾಡುವ ಭರವಸೆ ಕೇಳಿಬರುತ್ತಿದ್ದರೂ, ಕಾಮಗಾರಿ ಶೀಘ್ರ ಪ್ರಾರಂಭವಾಗಿ ಮಳೆಗಾಲದ ಹೊತ್ತಿಗೆ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆ ಎದುರಾಗಿದೆ.
ಬಾಗಲಕೋಟೆ–ಆಲಮಟ್ಟಿ ಮುಖ್ಯ ರಸ್ತೆಯಲ್ಲಿ ಸಂಗಮ ಕ್ರಾಸ್‌ನಿಂದ ಅಚನೂರ ಕ್ರಾಸ್‌ವರೆಗಿನ 14 ಕಿ.ಮೀ. ರಸ್ತೆ ಸುಧಾರಣೆ ಕಾರ್ಯ ಮುಗಿದಿದ್ದರೂ, ಉಳಿದ 16.15 ಕಿ.ಮೀ ರಸ್ತೆಯ ಸುಧಾರಣೆ ಈತನಕ ಮರೀಚಿಕೆಯಾಗಿದೆ. ರಸ್ತೆ ಸಂಪೂರ್ಣ ಹಾಳಾಗಿ ನಿತ್ಯ ಸಂಚರಿಸುವ ಹಾಗೂ ಆಲಮಟ್ಟಿಗೆ ಬರುವ ಪ್ರವಾಸಿಗರ ವಾಹನಗಳ ಓಡಾಟ ದುಸ್ತರವಾಗಿದೆ.
ಸೈಕಲ್ ಮೋಟಾರ ಸವಾರರಂತೂ 16 ಕಿ.ಮೀ ಪ್ರಯಾಣಿಸಲು ಹರಸಾಹಸಪಡಬೇಕಿದೆ. ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿವೆ. ಗುಂಡಿ ತಪ್ಪಿಸಿ ಹೋಗಬೇಕೆಂದರೆ ರಸ್ತೆಯ ಎಡ, ಬಲ ಭಾಗದ ಡಾಂಬರು ಕಿತ್ತು ಹೋಗಿ ದೊಡ್ಡ ತಗ್ಗು ಉಂಟಾಗಿವೆ. ಹೀಗಾಗಿ ಈ ರಸ್ತೆಯಲ್ಲಿನ ಪ್ರವಾಸ ‘ಪ್ರಯಾಸ’ವೇ ಅಗಿದೆ.
ಅಚನೂರ ಕ್ರಾಸ್‌ನಿಂದ ಮನಹಳ್ಳಿ ಕ್ರಾಸ್ ವರೆಗಿನ (ಹೆದ್ದಾರಿಗೆ ಕೂಡುವ) ರಸ್ತೆ ಸುಧಾರಣೆಗೆ ₹27.50 ಕೋಟಿ ಅನುದಾನಕ್ಕೆ ಕೆಬಿಜೆಎನ್ಎಲ್ 142ನೇ ಬೋರ್ಡ್ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಟೆಂಡರ್ ಕೂಡ ಆಗಿದೆ ಎನ್ನಲಾಗಿದೆ. ಹುಬ್ಬಳ್ಳಿಯ ಎಸ್.ಎನ್.ನಾಯಕ ಎಂಬುವವರಿಗೆ ಗುತ್ತಿಗೆ ಆಗಿದ್ದು, ಪುನರ್ವಸತಿ ಇಲಾಖೆಯ ಬಾಗಲಕೋಟೆ ವಿಭಾಗ–4ರ ಜೊತೆ ಒಪ್ಪಂದ ಪ್ರಕ್ರಿಯೆ ಆಗಬೇಕಷ್ಟೇ ಎನ್ನಲಾಗಿದೆ.
ಈ ಪ್ರಕ್ರಿಯೆ ಪೂರ್ಣಗೊಂಡು ಶೀಘ್ರ ರಸ್ತೆ ಸುಧಾರಣೆ ಕಾರ್ಯ ಪ್ರಾರಂಭವಾದರೆ ಮಳೆಗಾಲದ ಹೊತ್ತಿಗೆ ಮುಗಿಯಬಹುದು. ತಡವಾದರೆ ಮಳೆಗಾಲದ ನಂತರ ಕೆಲಸ ನಡೆಯಬಹುದು. ಒಂದೊಮ್ಮೆ ತಡವಾದರೆ, ಪ್ರಯಾಣದ ಗೋಳು ಇನ್ನೊಂದು ವರ್ಷ ಮುಂದುವರಿಯಲಿದೆ.
ಶೀಘ್ರ ಒಪ್ಪಂದ ಪ್ರಕ್ರಿಯೆ ಮುಗಿಸಿ ರಸ್ತೆ ಸುಧಾರಣೆ ಕಾಮಗಾರಿ ಪ್ರಾರಂಭಿಸಲು ಕ್ಷೇತ್ರದ ಶಾಸಕರು, ಸಂಬಂಧಿತ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ನಾಲ್ಕು ವರ್ಷಗಳಿಂದ ಈ ರಸ್ತೆಯ ಕಡೆಗೆ ಯಾರೂ ತಿರುಗಿ ನೋಡಿಲ್ಲ. ಮಂತ್ರಿಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಈ ರಸ್ತೆಯಲ್ಲಿ ಸಂಚಾರ ಮಾಡಿದ್ದರೂ ಗಮನಹರಿಸಿಲ್ಲ. ಈಗಲಾದರೂ ಸುಧಾರಣೆ ಕಾಮಗಾರಿ ಪ್ರಾರಂಭಿಸಿ ಪ್ರಯಾಣದ ಪ್ರಯಾಸಕ್ಕೆ ಇತಿಶ್ರೀ ಹಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಾರೆ.
ರಸ್ತೆ ಸುಧಾರಣೆ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ₹27.50 ಕೋಟಿ ಮೊತ್ತದ ಅನುಮೋದನೆಯಿದೆ. ಗುತ್ತಿಗೆದಾರರು ಮತ್ತು ಪುನರ್ವಸತಿ ವಿಭಾಗ-4ರ ನಡುವೆ ಒಪ್ಪಂದ ಪ್ರಕ್ರಿಯೆ ಮುಗಿದರೆ ಕಾಮಗಾರಿ ಆರಂಭವಾಗುತ್ತದೆ ಸುರೇಶ ಹಳ್ಳಿ ಕಾರ್ಯಪಾಲಕ ಎಂಜನಿಯರ್ ಪುನರ್ವಸತಿ ವಿಭಾಗ–4 ಬಾಗಲಕೋಟೆ
ಮೂರು ವರ್ಷಗಳಿಂದ ಆಲಮಟ್ಟಿ ರಸ್ತೆ ಸುಧಾರಣೆ ಆಗಿಲ್ಲ. ಕಾಮಗಾರಿಗೆ ಟೆಂಡರ್ ಆಗಿದ್ದರೂ ಈವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ಮಳೆಗಾಲ ಆರಂಭದೊಳಗೆ ಕಾಮಗಾರಿ ಮುಗಿದರೆ ಒಳ್ಳೆಯದು ಲಕ್ಷ್ಮಣ ದಡ್ಡಿ ಸಂಗಾಪೂರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.