ADVERTISEMENT

ಬಾಗಲಕೋಟೆ | ಸಿಎಂ ಖುರ್ಚಿ ಗುದ್ದಾಟ, ರಾಜ್ಯದ ಆಡಳಿತ ಯಂತ್ರ ಕುಸಿತ: ಶೆಟ್ಟರ್ ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 2:57 IST
Last Updated 11 ಜನವರಿ 2026, 2:57 IST
<div class="paragraphs"><p>ಸಂಸದ ಜಗದೀಶ ಶೆಟ್ಟರ್</p></div>

ಸಂಸದ ಜಗದೀಶ ಶೆಟ್ಟರ್

   

ಬಾಗಲಕೋಟೆ: ‘ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಡುವೆ ನಡೆದಿರುವ ಗುದ್ದಾಟದಿಂದಾಗಿ ರಾಜ್ಯದಲ್ಲಿ ಆಡಳಿತ ಕುಸಿದಿದ್ದು, ಜನ ಸರ್ಕಾರದ ಬಗ್ಗೆ ಬೇಸರಗೊಂಡಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಕುರ್ಚಿಗಾಗಿ ಇಬ್ಬರ ಮಧ್ಯೆ ನಡೆದಿರುವ ತಿಕ್ಕಾಟದಿಂದ ಆಡಳಿತ ವ್ಯವಸ್ಥೆ ಹಾಳಾಗಿದೆಯಲ್ಲದೇ, ಕಾನೂನು, ಸುವ್ಯವಸ್ಥೆಯೂ ಹದಗೆಟ್ಟಿದೆ ಎಂದರು.

ADVERTISEMENT

ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ ₹50 ಸಾವಿರ ಕೋಟಿ ಹಣ ವ್ಯಯವಾಗುತ್ತಿದ್ದರೆ, ಅಭಿವೃದ್ಧಿಗೆ ಬಿಡಿಗಾಸು ಸಿಗುತ್ತಿಲ್ಲ. ಬಡವರಿಗೆ ಸೂರು ಕೊಟ್ಟಿಲ್ಲ. ರಾಜ್ಯದ ಖಜಾನೆ ಖಾಲಿಯಾಗಿದ್ದು, ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ ಎಂದು ದೂರಿದ ಶೆಟ್ಟರ್, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯ ಹಣ ನೀಡದೇ ಬರೀ ಬೋಗಸ್ ಹೇಳಿಕೆ ನೀಡುತ್ತಿದ್ದಾರೆ. ಯೋಜನೆಗೆ ₹70 ಸಾವಿರ ಕೋಟಿ ಹಣ ಬೇಕು. ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಕೊಲೆ, ದರೋಡೆ, ಹತ್ಯೆ, ಅತ್ಯಾಚಾರ ಪ್ರಕರಣಗಳು ನಿತ್ಯ ನಡೆಯುತ್ತಿವೆ. ಹುಬ್ಬಳ್ಳಿಯಲ್ಲಿ ಈಚೆಗೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೋಲಿಸರು ದೌರ್ಜನ್ಯ ಎಸಗಿದ್ದಾರೆ. ಯಲ್ಲಾಪುರದಲ್ಲಿ ಹಿಂದೂ ಮಹಿಳೆಯ ಹತ್ಯೆ ನಡೆದಿದೆ. ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಸ್ವತಃ ಶಾಸಕ ಭರತರೆಡ್ಡಿ ಭಾಗಿಯಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ, ಸರ್ಕಾರ ಅವರನ್ನು ರಕ್ಷಿಸಲು ಹೊರಟಿದೆ ಎಂದು ಆರೋಪಿಸಿದರು.

ಅರಸುಗೆ ಹೋಲಿಕೆ ಬೇಡ

ಸಿಎಂ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಸುವುದು ಬೇಡ. ಅರಸು ತಮ್ಮ ಆಡಳಿತದಲ್ಲಿ ಭೂಸುಧಾರಣೆ ಕಾಯ್ದೆ ಸೇರಿ ಸಾಮಾಜಿಕವಾಗಿ ಸಾಕಷ್ಟು ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಹೇಳಿಕೊಳ್ಳುವಂತಹ ಯಾವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ  ಶೆಟ್ಟರ್‌, 7 ವರ್ಷ ಸಿ.ಎಂ ಆಗಿದ್ದೇನೆ ಎಂದು ಕೊಚ್ಚಿಕೊಳ್ಳುವುದು ಸರಿಯಲ್ಲ. ಶಿವರಾಜಸಿಂಗ್ ಚೌಹಾಣ 15 ವರ್ಷ ಸಿ.ಎಂ ಆಗಿ ಆಡಳಿತ ನಡೆಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.