
ಜಮಖಂಡಿ: ಕಷ್ಟವನ್ನು ಮೆಟ್ಟಿಲನ್ನಾಗಿ ಮಾಡಿಕೊಂಡು ಗುಡ್ಡವನ್ನು ಒಡೆದು, ಬೊಗಸಿ ನೀರಿಗಾಗಿ ಪರದಾಡುತ್ತಿರುವ ಮರೆಗುದ್ದಿ ಗುಡ್ಡದಲ್ಲಿ ಇಂದು ಬಂಗಾರದ ಬೆಳೆಯನ್ನು ತೆಗೆಯುತ್ತಿರುವ ರೈತರು ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದಾರೆ.
1.5 ಎಕರೆ ಜಮೀನಿನಿಂದ ಪ್ರಾರಂಭಿಸಿದ ಕೃಷಿ ತಾಲ್ಲೂಕಿನ ಮರೆಗುದ್ದಿ ಗ್ರಾಮದ ಬಾಳಪ್ಪ ಹಾಗೂ ಮಲ್ಲಪ್ಪ ಸಿದ್ರಾಮಪ್ಪ ಕಂಬಾರ ಸಹೋದರರು ಇಂದು 22 ಎಕರೆ ಸಮಗ್ರ ಕೃಷಿ ಭೂಮಿಯನ್ನು ತೆಗೆದುಕೊಂಡು ಕೃಷಿ ಮಾಡಿ ಸುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.
4.5 ಎಕರೆ ದ್ರಾಕ್ಷಿ, 2 ಎಕರೆ ಅರಿಷಿನ, 4 ಎಕರೆ ಬಾಳೆ, 7 ಎಕರೆ ಕಬ್ಬು, ಶುಂಠಿ, ಈರುಳ್ಳಿ, ಬಳ್ಳೂಳ್ಳಿ, ಗೋದಿ, ಮೆಕ್ಕೆಜೋಳ ಪೇರಲ ಹಣ್ಣು ಸೇರಿದಂತೆ ವಿವಿಧ ಸಮಗ್ರ ಕೃಷಿಯನ್ನು ಬೆಳೆದು ಪ್ರತಿವರ್ಷ ಅರ್ಧಕೋಟಿಗೂ ಅಧಿಕ ಲಾಭವನ್ನು ಪಡೆಯುತ್ತಿದ್ದಾರೆ. ಐದು ಕೊಳವೆ ಬಾವಿಗಳನ್ನು ಕೊರೆಸಿದ್ದು, ನಾಲ್ಕು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ, 22 ಎಕರೆಯಲ್ಲಿ ಬೆಳೆಯುವ ಪ್ರತಿ ಬೆಳೆಗೂ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.
4.5 ಎಕರೆ ದ್ರಾಕ್ಷಿ ಬೆಳೆಯುತ್ತಿದ್ದು ಒಣ ದ್ರಾಕ್ಷಿ ಮಾಡಲು ಮೂರು ದ್ರಾಕ್ಷಿಸಂಸ್ಕರಣಾ ಘಟಕ ತಯಾರಿಸಿಕೊಂಡಿದ್ದೇವೆ, ಅಂದಾಜು 70 ಟನ್ ಹಸಿ ಕಾಯಿ ಹಿಡಿಯುವ ಸಾಮರ್ಥ ಹೊಂದಿದೆ, ಪ್ರತಿವರ್ಷ ಅಂದಾಜು 15ಟನ್ ಗೂ ಅಧಿಕ ಒಣ ದ್ರಾಕ್ಷಿ ಬೆಳೆಯಲಾಗುತ್ತದೆ ಎನ್ನುತ್ತಾರೆ.
ಎಕರೆಗೆ 40-45ಟನ್ ಬಾಳೆಯನ್ನು ಬೆಳೆಯುತ್ತಿದ್ದು, ಬೆಳೆದ ಬಾಳೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಮಾರಾಟ ಮಾಡುತ್ತಾರೆ, ಕಲ್ಲು ಭೂಮಿಯಲ್ಲಿ ಪ್ರತಿ ಎಕರೆಗೆ 30-40 ಕ್ವಿಂಟಲ್ ಅರಿಷಿನ ಬೆಳೆ ತೆಗೆಯುತ್ತಿದ್ದು, ಎಕರೆಗೆ 60-70ಟನ್ ಕಬ್ಬು ಬೆಳೆದು ಸಾಧನೆ ಮಾಡುತ್ತಿದ್ದಾರೆ.
ಗೊಬ್ಬರ ಗ್ಯಾಸ್ ಅಳವಡಿಸಿಕೊಂಡು ಅದರ ಮೂಲಕ ಮನೆಯ ಅಡಿಗೆಯನ್ನು ಮಾಡಿಕೊಳ್ಳುತ್ತಾರೆ. ಬೆಳೆಗಳಿಗೆ ಡ್ರಿಪ್ ಮೂಲಕ ಬಿಡಲು ಜೀವಾನುಸಾರ ಘಟಕ, ಬಯೋಘಟಕವನ್ನು ಕಟ್ಟಿಕೊಂಡಿದ್ದು ಇದರಿಂದ ಉತ್ತಮ ಬೆಳೆ ಬರುತ್ತದೆ ಎನ್ನುತ್ತಾರೆ ಸಹೋದರರು.
ಮನೆಯ ಪಕ್ಕದಲ್ಲಿ 20 ಗುಂಟೆ ಜಮೀನಿನಲ್ಲಿ ಲಿಂಬು, ಸೀತಾಫಲ, ಸೇಬು, ರಾಮಫಲ, ಡ್ರ್ಯಾಗನ್ ಸೇರಿದಂತೆ 64 ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಮನೆಗೆ ಬಳಕೆ ಮಾಡಿ ಉಳಿದವುಗಳನ್ನು ಮಾರಾಟ ಮಾಡುತ್ತಾರೆ. ಮನೆಗೆ ಬೇಕಾದ ಎಲ್ಲ ಪದಾರ್ಥಗಳನ್ನು ರಾಸಾಯನಿಕವಿಲ್ಲದೆ ತಮ್ಮ ಜಮೀನಿನಲ್ಲಿ ಬೆಳೆದು ಬಳಸುತ್ತಾರೆ.
ಜಮೀನಿನ ಬದುಗಳಲ್ಲಿ ಸ್ಥಳವನ್ನು ವ್ಯರ್ಥ ಮಾಡದೆ ಅಲ್ಲಿ ಮೇವು ಹಚ್ಚಿ ಹೈನುಗಾರಿಕೆ ಮಾಡುತ್ತಿದ್ದಾರೆ, ಸುಮಾರು 25 ಜಾನುವಾರುಗಳನ್ನು ಸಾಕಿದ್ದು ಅದರಿಂದ 60-70 ಟನ್ ಗೊಬ್ಬರ ಉತ್ಪಾದನೆ ಮಾಡಿ ತಮ್ಮ ಜಮೀನುಗಳಿಗೆ ಬಳಸುತ್ತಾರೆ, ಹೆಚ್ಚಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಸಾವಯವ ಗೊಬ್ಬರ ಬಳಸಿ ಉತ್ತಮ ಬೆಳೆ ಬೆಳೆಯುತ್ತಿರುವುದು ವಿಶೇಷ.
ಕುಲಕಸಬಿನಲ್ಲಿ ಲಾಭ ಕಾಣದ ಕಾರಣ ಮೊದಲು ಬಹಳ ಬಡತನದಿಂದ ಬಂದಿದ್ದು 2001 ರಲ್ಲಿ ಸಾಲ ಮಾಡಿ 1.5 ಎಕರೆ ಗುಡ್ಡದ ಜಮೀನು ಖರೀದಿಸಿ ಅಲ್ಲಿಂದ ಭೂಮಿತಾಯಿಯನ್ನು ನಂಬಿ ಶ್ರದ್ಧೆಯಿಂದ ದುಡಿಯುತ್ತಾ ಇಂದು 22 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಬೆಳೆದು ಅಪಾರ ಲಾಭವನ್ನು ಪಡೆಯುತ್ತಿದ್ದೇವೆಬಾಳಪ್ಪ, ಮಲ್ಲಪ್ಪ ಸಹೋದರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.