
ಜಮಖಂಡಿ: ಹಲವು ವರ್ಷಗಳಿಂದ ದ್ರಾಕ್ಷಿ ಬೆಳೆಗಾರರರು ಬೆಲೆ ಕುಸಿತದಿಂದ ಪರದಾಡುತ್ತಿದ್ದರು. ಈ ಬಾರಿ ಹಸಿ ದ್ರಾಕ್ಷಿ ಹಾಗೂ ಒಣ ದ್ರಾಕ್ಷಿಗೆ ಬಂಪರ್ ಬೆಲೆ ಇದೆ. ಆದರೆ ಎರಡು ದಿನಗಳಿಂದ ವಾತಾವರಣ ಏರುಪೇರಾಗುತ್ತಿದ್ದು ಸಾವಳಗಿ ಭಾಗದ ಖಾಜಿಬೀಳಗಿ, ಗೋಠೆ ಗ್ರಾಮಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿ ರೈತರಿಗೆ ಆತಂಕ ತಂದಿದೆ.
ಸಾವಳಗಿ ಭಾಗದ 20ಕ್ಕೂ ಅಧಿಕ ಗ್ರಾಮಗಳಲ್ಲಿ ದ್ರಾಕ್ಷಿ ಪ್ರಮುಖ ಬೆಳೆಯಾಗಿದೆ. ದ್ರಾಕ್ಷಿ ಬೆಳೆಗಾರರಿಗೆ ದ್ರಾಕ್ಷಿ ಕೈಗೆಟಕುವುದರೊಳಗೆ ಹಲವು ಸಂಕಷ್ಟಗಳು ಎದುರಾಗುತ್ತಿವೆ. ಕೆಲವು ರೈತರು ಕಟಾವು ಮಾಡಿ ರ್‍ಯಾಕ್‌ನಲ್ಲಿ ಹಾಕಿದ್ದಾರೆ. ಇನ್ನೂ ಕೆಲ ರೈತರು ಕಟಾವು ಮಾಡಲು ತಯಾರಿ ನಡೆಸುತ್ತಿರುವಾಗ ಮಳೆಯಿಂದ ಕಂಗಾಲಾಗುವಂತಾಗಿದೆ.
ಅಕಾಲಿಕ ಮಳೆ ಸುರಿಯುವ ಸಂಭವವಿದೆ. ರೈತರು ಈಗ ದ್ರಾಕ್ಷಿ ಕಟಾವು ಮಾಡಿ ರ್‍ಯಾಕ್‌ನಲ್ಲಿ ಒಣದ್ರಾಕ್ಷಿ ತಯಾರಿಗೆ ಒಣಹಾಕಿದ್ದಾರೆ. ಮೋಡ ಕವಿದ ವಾತಾವರಣ ಜಿಟಿಜಿಟಿ ಮಳೆಯಿಂದ ಒಣದ್ರಾಕ್ಷಿ ಘಟಕಗಳಲ್ಲಿ ಹಾಕಿದ ದ್ರಾಕ್ಷಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ರೈತರಿಗೆ ಸಿಗುವ ಬೆಲೆ ಅರ್ಧದಷ್ಟು ಕಡಿಮೆಯಾಗುವ ಆತಂಕ ಮನೆಮಾಡಿದೆ. ಸದ್ಯ ಹಸಿ ದ್ರಾಕ್ಷಿಕಾಯಿ ಬೆಲೆ ₹80ರಿಂದ ₹110 ಇದ್ದು, ಒಣ ದ್ರಾಕ್ಷಿ ಬೆಲೆ ₹300 ರಿಂದ ₹450 ರವರೆಗೆ ಇದೆ. ಬೆಳೆ ಹಾನಿಯಾದರೆ ದರ ಕುಸಿತದಿಂದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ.
ಬಿಸಿಲಿನ ತಾಪಮಾನ ಕಡಿಮೆಯಾದರೆ ಗಿಡದಲ್ಲಿರುವ ದ್ರಾಕ್ಷಿ ಗೊನೆಗಳಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಮೋಡ ಕವಿದ ವಾತಾವರಣ ನಿರ್ಮಾಣದಿಂದ ರುಚಿಕರ ದ್ರಾಕ್ಷಿ ಉತ್ಪಾದನೆಯಾಗುವುದಿಲ್ಲ. ಸದ್ಯ ಕಳೆದ ವರ್ಷದಿಂದ ಉತ್ತಮ ದರ ಸಿಗುತ್ತಿದೆ. ಈ ಬಾರಿಯೂ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ.
ದ್ರಾಕ್ಷಿ ಕಟಾವು ಈಗ ಆರಂಭವಾಗಿದ್ದು, ಶೇ 30 ರಷ್ಟು ಮಾತ್ರ ದ್ರಾಕ್ಷಿ ಕಟಾವು ಆಗಿದೆ. ಉಳಿದ ಶೇ 70ರಷ್ಟು ದ್ರಾಕ್ಷಿ ಇನ್ನೂ ಕಟಾವು ಆಗಬೇಕಿದೆ. ಒಣದ್ರಾಕ್ಷಿ ಘಟಕದಲ್ಲಿ ಹಾಕಿದ ಕಾಯಿ ತೊಯ್ದರೆ ಕಪ್ಪು ಬಣ್ಣಕ್ಕೆ ತಿರುಗಿ ದರ ಕುಸಿಯುವ ಆತಂಕವಿದೆ. ಇನ್ನೂ ಗಿಡದಲ್ಲಿರುವ ಕಾಯಿಗೆ ಅಕಾಲಿಕ ಮಳೆ, ಆಲಿಕಲ್ಲು ಮಳೆ ಬಿದ್ದರೆ ಕಾಯಿ ಒಡೆದು ಹಾಳಾಗಿ ಹೋಗುತ್ತದೆ.
ದ್ರಾಕ್ಷಿ ಕಟಾವು ಪ್ರಾರಂಭವಾಗಿದೆ ಅಕಾಲಿಕ ಮಳೆಯಾಗಿ ರೈತರಿಗೆ ಹಾನಿಯಾದರೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಹೋಗಿ ಸ್ಪಂದಿಸಬೇಕುಅಭಯಕುಮಾರ ನಾಂದ್ರೇಕರ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ
ತಾಲ್ಲೂಕಿನಲ್ಲಿ 3800 ಹೆಕ್ಟೇರ್ ದ್ರಾಕ್ಷಿ ಬೆಳೆ ಇದ್ದು ಆಲಿಕಲ್ಲು ಮಳೆಯಾದರೆ ಗಾಳಿಯಿಂದ ದ್ರಾಕ್ಷಿ ಬೆಳೆಗೆ ಹಾನಿಯಾಗುತ್ತದೆ ರೈತರಿಗೆ ಮಳೆ ಗಾಳಿಯಿಂದ ನಷ್ಟವಾದರೆ ಇಲಾಖೆಯಿಂದ ಪರಿಹಾರ ನೀಡಲಾಗುವುದು ಮತ್ತು ಇನ್ಸೂರೆನ್ಸ್ ಪಾವತಿಯಾಗುತ್ತದೆಸಚಿನ ಮಾಚಕನೂರ ಸಹಾಯಕ ನಿರ್ದೇಶಕರು ತೋಟಗಾರಿಕ ಇಲಾಖೆ ಜಮಖಂಡಿ
ಇತರೆ ಬೆಳೆಗಳಿಗೂ ಆತಂಕ ಬೇಸಿಗೆ ಬೆಳೆಗಳಾದ ಗೋವಿನ ಜೋಳ ಹೆಚ್ಚಾಗಿದ್ದು ಮಳೆ ಮತ್ತು ಗಾಳಿಗೆ ಹಲವಾರು ರೈತರ ಗೋವಿನ ಜೋಳ ನೆಲ ಕಚ್ಚಿದೆ ಇನ್ನೂ ಸಕ್ಕರೆ ಕಾರ್ಖಾನೆಗೆ ಹೋಗದೆ ಶೇ20ರಷ್ಟು ಕಚ್ಚಾಕಬ್ಬು ಗಾಳಿಗೆ ಬಿದ್ದಿದೆ. ಹಲವಾರು ರೈತರು ಅರಿಷಿನವನ್ನು ಕುದಿಸಿ ನೆಲಕ್ಕೆ ಹಾಕಿದ್ದು ಅಕಾಲಿಕ ಮಳೆಯಿಂದ ಅರಿಷಿನ ತೊಯ್ದಿದೆ.ಇದರಿಂದ ಅರಿಷಿನ ಕಪ್ಪಾಗಿ ಬೆಲೆ ಕಡಿಮೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.