ADVERTISEMENT

ಕನ್ನಡ ಜಾನಪದ ನೆಲಮೂಲ ಸಂಸ್ಕೃತಿಯ ಪ್ರತೀಕ: ಹನಮಂತ ನಿರಾಣಿ

‘ಜಾನಪದ ಗೊಂಚಲು’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 4:57 IST
Last Updated 13 ಜುಲೈ 2025, 4:57 IST
ಬೆಣ್ಣೂರು ಗ್ರಾಮದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಜಾನಪದ ಗೊಂಚಲು ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಬಿಡುಗಡೆಗೊಳಿಸಿದರು
ಬೆಣ್ಣೂರು ಗ್ರಾಮದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಜಾನಪದ ಗೊಂಚಲು ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಬಿಡುಗಡೆಗೊಳಿಸಿದರು   

ರಾಂಪುರ: ಕರ್ನಾಟಕ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿರುವ ಕನ್ನಡ ಜಾನಪದ ನೆಲಮೂಲ ಸಂಸ್ಕೃತಿಯ ಪ್ರತೀಕ ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.

ಸಮೀಪದ ಬೆಣ್ಣೂರ ಗ್ರಾಮದಲ್ಲಿ ಶುಕ್ರವಾರ ಜರುಗಿದ ದಿ.ಶೇಷಪ್ಪ ಬಡಿಗೇರ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಸಂಶೋಧಕ ಡಾ.ವೀರೇಶ ಬಡಿಗೇರ ಅವರ ‘ಜಾನಪದ ಗೊಂಚಲು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಬಾಗಲಕೋಟೆ ಜಿಲ್ಲಾ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಣ್ಣೂರು ಗ್ರಾಮದ ಸಾಹಿತಿಗಳ ಕೊಡುಗೆ ಅಪಾರ. ಸಂಶೋಧಕ ಡಾ.ವೀರೇಶ ಬಡಿಗೇರ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದು, ತಮ್ಮ ಜಾನಪದ ಗೊಂಚಲು ಕೃತಿಯಲ್ಲಿ ಜನಪದರ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹನಮಂತ ನಿರಾಣಿ ಹೇಳಿದರು.

ADVERTISEMENT

ಡಾ.ವೀರೇಶ ಬಡಿಗೇರ ಮಾತನಾಡಿ, ತಂದೆಯವರು ನೀಡಿದ ವೈಚಾರಿಕ ಸಂಸ್ಕಾರವನ್ನು ಮೈಗೂಡಿಸಿಕೊಂಡಿದ್ದು, ಸ್ವಾವಲಂಬಿಯಾಗಿ ಬದುಕಬೇಕು ಎಂಬ ಅವರ ಚಿಂತನೆ ನನ್ನಲ್ಲಿ ಬೇರೂರಿದೆ ಎಂದರು.

ಸಾನಿಧ್ಯ ವಹಿಸಿದ್ದ ಮುರನಾಳದ ಜಗನ್ನಾಥ ಸ್ವಾಮೀಜಿ, ಆಚರಣೆಗಳು ಸೂತಕದ ಮೂಲಕ ಕೊನೆಗೊಳ್ಳದೆ ಸಂಸ್ಕೃತಿಯ ಮೂಲಕ ಆರಂಭಗೊಳ್ಳಬೇಕು. ದಿ.ಶೇಷಪ್ಪ ಬಡಿಗೇರ ಕರಡಿಮಜಲಿನ ಹೆಸರಾಂತ ಕಲಾವಿದರಾಗಿ ಜನಮಾನಸದಲ್ಲಿ ಹೆಸರು ಮಾಡಿದ್ದಾರೆ ಎಂದರು.

ಸಾಹಿತಿ ಎಸ್.ಜಿ.ಕೋಟಿ ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್.ಯಾದವಾಡ, ಸಿದ್ದಪ್ಪ ಹುಂಡೇಕಾರ, ವೀರೇಂದ್ರ ಶೀಲವಂತ, ಸಿದ್ದರಾಮ ಶಿರೋಳ, ರಾಜಶೇಖರ ಕಂಬಾರ, ಮುತ್ತಣ್ಣ ಬೆಣ್ಣೂರ, ಕೆ.ಎನ್.ಬಡಿಗೇರ. ಸಿ.ಪಿ.ಮಾಯಾಚಾರಿ ದಿ.ಶೇಷಪ್ಪ ಬಡಿಗೇರ ಅವರಿಗೆ ನುಡಿನಮನ ಸಲ್ಲಿಸಿದರು.

ಶಿವು ರಾಂಪೂರ ಸ್ವಾಗತಿಸಿದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಶೇಖರ ಗೊಳಸಂಗಿ ವಂದಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳು ಸ್ವರ ಶ್ರದ್ದಾಂಜಲಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.