ಜಮಖಂಡಿ (ಬಾಗಲಕೋಟೆ): ‘ತಾಲ್ಲೂಕಿನ ಕಲ್ಹಳ್ಳಿ ಗ್ರಾಮದ ಸತ್ಯಕಾಮ ಪ್ರತಿಷ್ಠಾನದ ‘ಸುಮ್ಮನೆ’ ಸಭಾಭವನದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯಸಭೆ ಹಮ್ಮಿಕೊಳ್ಳಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
‘ಕಾರ್ಯಕಾರಿಣಿ ಸಮಿತಿಯಲ್ಲಿ ಅನುಮೋದನೆ ಪಡೆದು, ಸಭೆಯ ಸ್ಥಳ ಘೋಷಿಸಲಾಗುವುದು. ಎಲ್ಲಿಯಾದರೂ ಸಾಮಾನ್ಯ ಸಭೆ ಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ಹಳ್ಳಿಗಳಲ್ಲಿ ಸಾಮಾನ್ಯ ಸಭೆ ಮಾಡುವುದರಿಂದ ಜನರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡುತ್ತದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಪರಿಷತ್ತಿನ ವಾರ್ಷಿಕ ಸಭೆಯು ಕೆಲವರ ಕುತಂತ್ರದಿಂದ ನೆರವೇರಲಿಲ್ಲ. ಪರಿಷತ್ತಿನ ಸದಸ್ಯ ಬಲ 4 ಲಕ್ಷ ಇದೆ. ಎಲ್ಲರೂ ಬಂದರೆ ಹೇಗೆ ನಿಭಾಯಿಸಲು ಸಾಧ್ಯ ಎಂದು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದರು. ಸುರಕ್ಷತೆ ಕಾರಣದಿಂದ ಸಭೆಗೆ ಅನುಮತಿ ನಿರಾಕರಿಸಲಾಯಿತು’ ಎಂದು ಅವರು ಹೇಳಿದರು.
‘ದೊಡ್ಡ ಸಂಸ್ಥೆಯಲ್ಲಿ ಪರ, ವಿರೋಧ ಸಹಜ. ಆದರೆ, ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ವಸುಂಧರಾ ಭೂಪತಿ, ಹಂ.ಪ.ನಾಗರಾಜಯ್ಯ ಸೇರಿ ಕೆಲವರು ದ್ವೇಷದ ಕಾರಣಕ್ಕೆ ಕುತಂತ್ರ ನಡೆಸಿದ್ದಾರೆ. ಅದಕ್ಕೆ ಬಗ್ಗುವದಿಲ್ಲ, ದಾರಿ ತಪ್ಪಿಸುವ ಕೆಲಸವನ್ನು ಅವರು ಬಿಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.