ADVERTISEMENT

ಸಾಕ್ಷಾತ್‌ ಸಮೀಕ್ಷೆ – ಬಾಗಲಕೋಟೆ : ಮುಳುಗಡೆ ಜಿಲ್ಲೆಯಲ್ಲಿ ತೇಲುವವರು ಯಾರು?

ಬಿಸಿಲಿಗಿಂತ ಒಳಏಟು, ಬಂಡಾಯದ ತಾಪವೇ ಹೆಚ್ಚು

ಬಸವರಾಜ ಹವಾಲ್ದಾರ
Published 4 ಮೇ 2023, 20:15 IST
Last Updated 4 ಮೇ 2023, 20:15 IST
   

ಬಾಗಲಕೋಟೆ: ಜಿಲ್ಲೆಯಲ್ಲಿ ಅಭ್ಯರ್ಥಿಗಳಿಗೆ ಉರಿಬಿಸಿಲಿಗಿಂತ ಒಳೇಟು, ಬಂಡಾಯದ ತಾಪ ಹೆಚ್ಚಾಗಿದೆ. ಅಸಮಾಧಾನ ಶಮನಗೊಳಿಸಿ, ವಿಜಯಮಾಲೆ ಹಾಕಿಕೊಳ್ಳಲು ಬೆವರಿಳಿಸುತ್ತಿದ್ದಾರೆ. ಒಗ್ಗಟ್ಟಿನ ಮಂತ್ರದ ನಡುವೆಯೇ ಅಲ್ಲಲ್ಲಿ ಬಿರುಕುಗಳೂ ಕಾಣಿಸಿಕೊಂಡಿವೆ. ಒಂದು ಬಿರುಕು ಸರಿಪಡಿಸಿಕೊಂಡು ಮುನ್ನುಗ್ಗುವ ವೇಳೆಗೆ ಮತ್ತೊಂದು ಬಿರುಕು ತೆರೆದುಕೊಳ್ಳುತ್ತಿರುವುದು ಅಭ್ಯರ್ಥಿಗಳನ್ನು ಹೈರಾಣಾಗಿಸಿದೆ. 

ಬಾದಾಮಿ, ಬಾಗಲಕೋಟೆ, ಜಮಖಂಡಿ, ತೇರದಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಓಟಕ್ಕೆ ಬಿಜೆಪಿ ನಾಯಕರೇ ಒಳೇಟು ನೀಡುವ ಭೀತಿ ಇದ್ದರೆ, ಬೀಳಗಿ, ಜಮಖಂಡಿ, ಮುಧೋಳ, ಬಾಗಲಕೋಟೆ, ತೇರದಾಳ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಯಕರು, ಬಂಡಾಯಗಾರರು ಆ ಪಕ್ಷದ ಅಭ್ಯರ್ಥಿಗಳಿಗೆ ಅಡ್ಡಗಾಲಾಗುವ ಲಕ್ಷಣಗಳಿವೆ.

ಪಕ್ಷಾಂತರ ಪರ್ವ ಜಿಲ್ಲೆಯಲ್ಲಿ ಜೋರಾಗಿದ್ದು, ಪಕ್ಷದಲ್ಲಿರುವ ಅಸಮಾಧಾನಿತರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಅಭ್ಯರ್ಥಿಗಳಿಗಿದೆ. ಕಾಂಗ್ರೆಸ್‌, ಬಿಜೆಪಿಗಳೆರಡೂ ಅಸಮಾಧಾನಿತರನ್ನು ಸೆಳೆದು ಮತ ಪ್ರಮಾಣ ಹೆಚ್ಚಿಸಿಕೊಳ್ಳುವ ಕಸರತ್ತು ನಡೆಸುತ್ತಿವೆ.

ADVERTISEMENT

ತೇರದಾಳ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕ ಸಿದ್ದು ಸವದಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಉಮಾಶ್ರೀ ಬದಲಾಗಿ ಹೊಸಮುಖ ಸಿದ್ದು ಕೊಣ್ಣೂರ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ ಮುಖಂಡ ಡಾ.ಪದ್ಮಜೀತ ನಾಡಗೌಡ ಪಾಟೀಲ ಬಂಡಾಯದ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿಗಳೆರಡರಲ್ಲೂ ಅಸಮಾಧಾನವಿದೆ. ಎಎಪಿಯ ಅರ್ಜುನ ಹಲಗಿಗೌಡರ, ಪಕ್ಷೇತರ ಅಂಬಾದಾಸ ಕಾಮೂರ್ತಿ ಗಮನ ಸೆಳೆಯುತ್ತಿದ್ದಾರೆ. ‘ಕಾಂಗ್ರೆಸ್‌, ಬಿಜೆಪಿ ತಮ್ಮ ಸಮುದಾಯಕ್ಕೆ ಟಿಕೆಟ್‌ ನೀಡಿಲ್ಲ’ ಎಂದು ಅಸಮಾಧಾನಗೊಂಡಿರುವ ನೇಕಾರರೇ ಇಲ್ಲಿ ನಿರ್ಣಾಯಕರಾಗಲಿದ್ದಾರೆ.

2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಬಿ.ಶ್ರೀರಾಮುಲು ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಬಾದಾಮಿ ಕ್ಷೇತ್ರದಲ್ಲೀಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಪುತ್ರ ಭೀಮಸೇನ ಚಿಮ್ಮನಕಟ್ಟಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಶಾಂತಗೌಡ ಪಾಟೀಲ ಸ್ಫರ್ಧೆಗಿಳಿದಿದ್ದು, ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ ಅಸಮಾಧಾನ ಬದಿಗೊತ್ತಿ ಪ್ರಚಾರಕ್ಕಿಳಿದಿದ್ದಾರೆ. ಜೆಡಿಎಸ್‌ನ ಹನುಮಂತ ಮಾವಿನಮರದ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಎಚ್.ಡಿ. ಕುಮಾರಸ್ವಾಮಿ ಅವರೇ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿಗೆ ಇಲ್ಲಿ ಒಳೇಟಿನ ಭೀತಿ ಕಾಡುತ್ತಿದೆ.

ಮುಧೋಳ ಕ್ಷೇತ್ರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಆರ್‌.ಬಿ. ತಿಮ್ಮಾಪುರ ಕಣದಲ್ಲಿದ್ದು, ಹಳೆಯ ಎದುರಾಳಿಗಳ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸತೀಶ ಬಂಡಿವಡ್ಡರ ಬಂಡಾಯ ಸಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇದು ಕಾಂಗ್ರೆಸ್‌ನ ತಲೆನೋವನ್ನು ಹೆಚ್ಚಿಸಿದೆ. 

ಬೀಳಗಿ ಕ್ಷೇತ್ರದಲ್ಲಿ ಸಚಿವ ಮುರುಗೇಶ ನಿರಾಣಿ ಬಿಜೆಪಿಯಿಂದ, ಜೆ.ಟಿ. ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ಸಾಂಪ್ರದಾಯಿಕ ಎದುರಾಳಿಗಳ ನಡುವೆ ಸ್ಪರ್ಧೆ ನಡೆಯಲಿದೆ. ಟಿಕೆಟ್‌ ಬಯಸಿದ್ದ ಬಸವಪ್ರಭು ಪಾಟೀಲ ಸಮಾಧಾನಗೊಂಡು ಪ್ರಚಾರಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಬಸವರಾಜ ಖೋತ, ಶಿವಾನಂದ ನಿಂಗನೂರ, ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್.ಬಿ. ಬನ್ನೂರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ಗೆ ಒಳೇಟಿನ ಭೀತಿಯೂ ಇದೆ. 

ಶಾಸಕ ದೊಡ್ಡನಗೌಡ ಪಾಟೀಲ ಹುನಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ವಿಜಯಾನಂದ ಕಾಶಪ್ಪನವರ ಸ್ಪರ್ಧಿಸಿದ್ದಾರೆ. ಮೂರು ಚುನಾವಣೆಗಳಿಂದ ಇವರೇ ಪರಸ್ಪರ ಎದುರಾಳಿಗಳಾಗಿದ್ದಾರೆ. ಕಳೆದ ಚುನಾವಣೆಯಲ್ಲಿ  ಪಕ್ಷೇತರರಾಗಿ 25 ಸಾವಿರಕ್ಕೂ ಹೆಚ್ಚು ಮತ ಪಡೆದು, ಗಮನ ಸೆಳೆದಿದ್ದ ಎಸ್‌.ಆರ್‌. ನವಲಿ ಹಿರೇಮಠ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇದು ತ್ರಿಕೋನ ಸ್ಪರ್ಧೆಗೆ ಕಾರಣವಾಗಿದೆ.

ಬಾಗಲಕೋಟೆ ನಕ್ಷೆ

ಬಾಗಲಕೋಟೆ ಕ್ಷೇತ್ರದಲ್ಲಿ ಶಾಸಕ ವೀರಣ್ಣ ಚರಂತಿಮಠ ಬಿಜೆಪಿ ಅಭ್ಯರ್ಥಿ. ಬಿಜೆಪಿಯಲ್ಲಿದ್ದ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಎಚ್‌.ವೈ. ಮೇಟಿ ಸ್ಪರ್ಧಿ. ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ದೇವರಾಜ ಪಾಟೀಲ ಕಾಂಗ್ರೆಸ್‌ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ, ಹಿಂದೆ ಬಾಗಲಕೋಟೆ ಕ್ಷೇತ್ರದ ಶಾಸಕರಾಗಿದ್ದ ಪಿ.ಎಚ್. ಪೂಜಾರ ಪ್ರಚಾರಕ್ಕೆ ಇಳಿದಿಲ್ಲ. ಕಾಂಗ್ರೆಸ್, ಬಿಜೆಪಿ ಬಂಡಾಯ ಎದುರಿಸುತ್ತಿವೆ.

ಸಿದ್ದು ನ್ಯಾಮಗೌಡರ ನಿಧನದ ನಂತರ ನಡೆದ ಜಮಖಂಡಿ ಉಪಚುನಾವಣೆಯಲ್ಲಿ ಗೆದ್ದಿದ್ದ ಆನಂದ ನ್ಯಾಮಗೌಡ ಜಮಖಂಡಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ. ಬಿಜೆಪಿ ತನ್ನ ಅಭ್ಯರ್ಥಿ ಬದಲಾಯಿಸಿದ್ದು ಹೊಸಮುಖ ಜಗದೀಶ ಗುಡಗುಂಟಿ ಅವರನ್ನು ಕಣಕ್ಕಿಳಿಸಿದೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸುಶೀಲಕುಮಾರ ಬೆಳಗಲಿ ಪಕ್ಷೇತರರಾಗಿ ಸ್ಫರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಸವರಾಜ ಸಿಂಧೂರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಪೈಪೋಟಿ ಇದೆ. 

ತೇರದಾಳ, ಹುನಗುಂದ, ಬಾದಾಮಿ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವ ನೇಕಾರ ಸಮುದಾಯದವರೊಬ್ಬರಿಗೂ ಜಿಲ್ಲೆಯಲ್ಲಿ ಟಿಕೆಟ್‌ ನೀಡಿಲ್ಲ ಎಂಬ ಅಸಮಾಧಾನವಿದೆ. ಆ ಸಮುದಾಯದ ನಿರ್ಧಾರ ಮೂರ್ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ನಿರ್ಧರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.