ಬಾಗಲಕೋಟೆ: ನಗರದಲ್ಲಿ ಈಚೆಗೆ ನಡೆದ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯವನ್ನು ಪ್ರಚೋದನೆಗೆ ಒಳಪಡಿಸಿದ ಹಿಂದೂ ಸಂಘಟನೆಗಳ ಸಂಘಟಕರ ಮೇಲೆ ಹಾಗೂ ರಾತ್ರಿ ವೇಳೆ ಡಿಜೆ ಬಳಕೆ ಮತ್ತು ಮೆರವಣಿಗೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಿಗೆ ಮಂಗಳವಾರ ಕರ್ನಾಟಕ ಮುಸ್ಲಿಂ ಯೂನಿಟಿ ಮನವಿ ಸಲ್ಲಿಸಿದೆ.
ಮೆರವಣಿಗೆಯು ಪಂಕಾ ಮಸೀದಿ ಹತ್ತಿರ ಸುಮಾರು ಹೊತ್ತು ಕರ್ಕಶ ಧ್ವನಿ ಹೊಂದಿದ ಡಿಜೆ ಬಳಸಿ ಮುಸ್ಲಿಂ ಸಮುದಾಯ ಪ್ರಚೋದನೆಗೆ ಒಳಪಡುವ ಹಾಡು ಹಾಕಿ ರಂಜಾನ್ ವಿಶೇಷ ಪ್ರಾರ್ಥನೆ ಮಾಡುತ್ತಿರುವ ಜನರಿಗೆ ಭಂಗ ತಂದಿದ್ದಾರೆ ಎಂದು ದೂರಿದ್ದಾರೆ.
ಮೆರವಣಿಗೆಗೆ ರಾತ್ರಿ 10ರ ನಂತರವೂ ಪರವಾನಗಿ ಕೊಟ್ಟಿದ್ದು ಎಷ್ಟು ಸರಿ? ಮಸೀದಿಯ ಸ್ಥಳದಲ್ಲಿ ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಕೊಮು ಗಲಭೆಗಳು ಉಂಟಾಗಿದ್ದರೂ ಪೊಲೀಸ್ ಇಲಾಖೆ ಮತ್ತು ಇಂಟಲಿಜೆನ್ಸ್ ವಿಭಾಗದವರು ಪೂರ್ವಸಿದ್ಧತೆ ಮಾಡಿಕೊಳ್ಳದೇ ಮೆರವಣಿಗೆಗೆ ಅವಕಾಶಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಇದ್ದರೂ, ಪೊಲೀಸ್ ಇಲಾಖೆ ಮಸೀದಿ ಹತ್ತಿರ ಹೆಚ್ಚಿನ ಪೊಲೀಸ್ ಕಾವಲು ಹಾಕಿರಲಿಲ್ಲ. ರಂಜಾನ್ ಹಿನ್ನೆಲೆಯಲ್ಲಿ ರಾತ್ರಿ ಪ್ರಾರ್ಥನೆಗೆ ನೂರಾರು ಸಂಖ್ಯೆಯ ಮುಸ್ಲಿಮರು ಸೇರಿರುತ್ತಾರೆ ಎಂಬ ಮಾಹಿತಿ ಇಲಾಖೆಗೆ ಇರಲಿಲ್ಲವೇ ಎಂದು ಕೇಳಿದ್ದಾರೆ.
ಮಸೀದಿ ಒಳಗಡೆಯಿಂದ ಚಪ್ಪಲಿ ತೂರಿ ಬಂದಿರುವ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಚಪ್ಪಲಿ ತೂರಿರುವ ವ್ಯಕ್ತಿಯನ್ನು ಕಾನೂನು ಕ್ರಮಕ್ಕೊಳಪಡಿಸಲಿ. ಆದರೆ, ರಂಜಾನ್ ಪ್ರಾರ್ಥನೆಗೆ ಬಂದ ಯುವಕರ ಬಂಧನ ಖಂಡನಾರ್ಹ ವಿಷಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠ ಸಿದ್ಧಾರ್ಥ ಗೋಯಲ್ ತೆಲೆಗೆ ಬಡಿದಿರುವ ಕಲ್ಲು ಯಾವ ಕಡೆಯಿಂದ ತೂರಿ ಬಂತು ಎಂಬ ಬಗ್ಗೆ ತನಿಖೆಯಾಗಬೇಕು. ತರಕಾರಿ ಮಾರುಕಟ್ಟೆಯಲ್ಲಿ ಮುಸ್ಲಿಮರಿಗೆ ಸೇರಿದ ತಳ್ಳುವ ಗಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆಯೂ ತನಿಖೆಯಾಗಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.