ADVERTISEMENT

ಕೆರೂರ | ಮನೆ ಹಂಚಿಕೆ ವಿಳಂಬ: ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:01 IST
Last Updated 10 ಜುಲೈ 2025, 4:01 IST
ಕೆರೂರ ಪಟ್ಟಣದಲ್ಲಿ ಮನೆ ಹಂಚಿಕೆ ವಿಳಂಬ ಆರೋಪಿಸಿ ರೈತ ಸಂಘದಿಂದ ಬುಧವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ‌ನಡೆಸಿದರು
ಕೆರೂರ ಪಟ್ಟಣದಲ್ಲಿ ಮನೆ ಹಂಚಿಕೆ ವಿಳಂಬ ಆರೋಪಿಸಿ ರೈತ ಸಂಘದಿಂದ ಬುಧವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ‌ನಡೆಸಿದರು   

ಕೆರೂರ: ವಸತಿ ಯೋಜನೆಯಡಿ ಹಂಚಿಕೆಯಾದ ಮನೆಗಳನ್ನು ಮಂಜೂರು ಮಾಡದೆ ಇರುವುದನ್ನು ಖಂಡಿಸಿ ಪಟ್ಟಣದಲ್ಲಿ ಬುಧವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಬದಾಮಿ ಕ್ರಾಸ್‌ನಿಂದ ಪಟ್ಟಣ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ವಸತಿ ಯೋಜನೆಯಡಿ 2011ರಲ್ಲಿ ಸುಮಾರು 350 ಮನೆಗಳು ಮಂಜೂರಾಗಿವೆ. ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡದೆ ಪಟ್ಟಣ ಪಂಚಾಯಿತಿಯವರು ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಬಸಪ್ಪ ಗೋನಾಳ ಮಾತನಾಡಿ, 2019ರಲ್ಲಿ ಬಾದಾಮಿ ಶಾಸಕರಾಗಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಫಲಾನುಭವಿಗಳಿಗೆ ವಿನಾಕಾರಣ ತೊಂದರೆ ಮಾಡಬೇಡಿ, ಅರ್ಹ ಫಲಾನುಭವಿಗಳಿಗೆ ಶೀಘ್ರ ಮನೆ ಮಂಜೂರು ಮಾಡಿ ಎಂದು ಹೇಳಿದ್ದರು ಎಂದರು.

ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿ, ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿ, ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಮಾತನಾಡಿ, ‘ರಾಜೀವ ಗಾಂಧಿ ವಸತಿ ನಿಗಮಕ್ಕೆ ಈಗಾಗಲೇ ಜಿ+1 ಮಾದರಿಯ ಮನೆ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಪ್ರಸ್ತಾವ ಮಂಜೂರಾದ ನಂತರ ಆಶ್ರಯ ಕಮಿಟಿ ಅಧ್ಯಕ್ಷರಾದ ಶಾಸಕರ ಸಮ್ಮುಖದಲ್ಲಿ ಸಭೆ ಕರೆದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸುಭಾಸ್ ಹಂಚನಾಳ, ಗೋವಿಂದಪ್ಪ ಬೆಳಗಂಟಿ, ಹುಸೇನಸಾಬ ಮಾಲದಾರ, ಗುಡುಮಾ ವಾಲಿಕಾರ, ಪ್ರಿಯಾನ ಕಲಬುರ್ಗಿ, ನೀಲವ್ವ ನಾಯ್ಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.