ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ, ಪರಿಹಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಜುಲೈ 16ರಂದು ಬಾಗಲಕೋಟೆಯಲ್ಲಿ ಸಭೆ ಕರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಯೋಜನಾ ಬಾಧಿತರ ಹಿತರಕ್ಷಣಾ ಸಮಿತಿಗೆ ಭರವಸೆ ನೀಡಿದ್ದಾರೆ.
ಮುಧೋಳದಲ್ಲಿ ಸೋಮವಾರ ಉಸ್ತುವಾರಿ ಸಚಿವರನ್ನು ಸಮಿತಿಯ ಮುಖಂಡರು ಭೇಟಿಯಾಗಿ, 13 ವರ್ಷಗಳ ಹಿಂದೆ ಸರ್ಕಾರವು ಆಲಮಟ್ಟಿ ಜಲಾಶಯದ ಗೇಟಿನ ಎತ್ತರ ಎತ್ತರಿಸಲು ನಿರ್ಣಯ ತೆಗೆದುಕೊಂಡಿತು. ಆದರೆ, ನಿರ್ಣಯ ಇಲ್ಲಿಯವರೆಗೆ ಜಾರಿಗೆ ಬಂದಿರುವುದಿಲ್ಲ. ಇದರಿಂದಾಗಿ ಮುಳುಗಡೆ ಪ್ರದೇಶದ ರೈತರು ಅತಂತ್ರರಾಗಿದ್ದಾರೆ. ಅವರ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ 524.256 ಪ್ರದೇಶದಲ್ಲಿ ಮುಳುಗಡೆಯಾಗುವ ಭೂಮಿಯನ್ನು ಒಂದೇ ಹಂತದಲ್ಲಿ ಸ್ವಾಧೀನ ಪಡಿಸಿಕೊಳ್ಳುವ ಮತ್ತು ಒಪ್ಪಂದದ ಬೆಲೆ ನಿಗದಿ ಪಡಿಸುವ ಭರವಸೆ ಈಡೇರಿಸಬೇಕು. ಭೂ ಸ್ವಾಧೀನಕ್ಕೆ ಪ್ರತಿ ವರ್ಷ ಪ್ರತ್ಯೇಕವಾಗಿ ಅನುದಾನ ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಅಧಿಕಾರಿಗಳನ್ನು ಭೇಟಿಯಾಗಿ ಪ್ರಶ್ನಿಸಿದಾಗ 524.256ರ ವ್ಯಾಪ್ತಿಯ ಒಂದೇ ಹಂತದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಬಗ್ಗೆ ಯಾವುದೇ ಆದೇಶ ಬಂದಿರುವುದಿಲ್ಲ. ಆದೇಶ ಮತ್ತು ಅನುದಾನ ಬರದೇ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಶೀಘ್ರದಲ್ಲಿಯೇ ಸಭೆ ಕರೆದು ಚರ್ಚಿಸುವುದಾಗಿ ಹೇಳಿದರಲ್ಲದೇ, ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಂದದ (ಕನ್ಸೆಂಟ್) ಅವಾರ್ಡ್ ಬಗ್ಗೆ ಚರ್ಚಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂತರಗೊಂಡ ತಿಳಿಸಿದ್ದಾರೆ.
ಅದೃಷ್ಯಪ್ಪ ದೇಸಾಯಿ, ವೆಂಕಣ್ಣ ಗಿಡ್ಡಪ್ಪನವರ್, ಎಂ.ಎಸ್. ಕೌಜಲಗಿ, ಆನಂದಪ್ಪ ನಾಯಕ, ಎಸ್.ಡಿ. ಪಾಟೀಲ, ಮಂಜು ಅರಕೇರಿ, ಜಿ.ಡಿ. ದೇಸಾಯಿ, ಶಿವಮೂರ್ತಿ, ಸಂಗಪ್ಪ ಕೊಪ್ಪದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.