ಕೂಡಲಸಂಗಮ: ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಬೇಕಾದ ಬಸ್ ತಂಗುದಾಣಗಳು ನಿರುಪಯುಕ್ತವಾಗಿದ್ದು, ಕುಡುಕರ ನೆಚ್ಚಿನ ತಾಣಗಳಾಗಿವೆ. ಪ್ರಯಾಣಿಕರು ನಿತ್ಯ ರಸ್ತೆಯ ಬದಿಯಲ್ಲಿಯೇ ನಿಂತು ಬಸ್ ಹತ್ತುತ್ತಾರೆ.
ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಬಸ್ ತಂಗುದಾಣಗಳು ನಿರ್ವಹಣೆಯ ಕೊರತೆಯಿಂದ ಪ್ರಯಾಣಿಕರು ಕಾಲಿಡದಂತೆ ಆಗಿವೆ.
ಪ್ರವಾಸಿ ತಾಣವಾದ ಕೂಡಲಸಂಗಮ ಹಾಗೂ ಸುತ್ತ–ಮುತ್ತಲಿನ ಗ್ರಾಮದ ರಸ್ತೆಯ ಬದಿ ತಾಲ್ಲೂಕು ಪಂಚಾಯಿತಿ, ಪ್ರವಾಸೋದ್ಯಮ ಮತ್ತು ಲೊಕೋಪಯೋಗಿ ಇಲಾಖೆ ಬಸ್ ತಂಗುದಾಣಗಳನ್ನು ನಿರ್ಮಿಸಿವೆ. ಕೆಲವು ಕಡೆ ಶಾಸಕ, ಸಂಸದರ ಅನುದಾನದಲ್ಲಿಯೂ ನಿರ್ಮಾಣ ಮಾಡಲಾಗಿದೆ.
ನಿರ್ಮಾಣ ಮಾಡಿದ ನಂತರ ನಿತ್ಯ ಬಸ್ ತಂಗುದಾಣವನ್ನು ಸ್ವಚ್ಛತೆ ಮಾಡುವ ಕಾರ್ಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮಾಡಬೇಕು. ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವಚ್ಛತೆ ಮಾಡದೇ ಇರುವ ಪರಿಣಾಮ, ಬಸ್ ತಂಗುದಾಣಗಳು ಕಸದ ರಾಶಿಯಿಂದ ತುಂಬಿವೆ.
ಗಬ್ಬು ನಾರುವ ವಾಸನೆಯಿಂದ ಪ್ರಯಾಣಿಕರು ಬಸ್ ತಂಗುದಾಣಗಳ ಕಡೆ ಕಾಲಿಡುತ್ತಿಲ್ಲ. ಸಂಜೆಯಾಗುತ್ತಿದಂತೆ ಬಸ್ ತಂಗುದಾಣಗಳಲ್ಲಿ ಕುಡುಕರ ದಂಡೇ ಇರುತ್ತದೆ. ಬಸ್ ತಂಗುದಾಣಗಳು ಮದ್ಯದ ಬಾಟಲಿ, ಕಸದ ರಾಶಿಯಿಂದ ತುಂಬಿವೆ.
ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು ಬಸ್‌ಗಳನ್ನು ಬಸ್ ತಂಗುದಾಣದ ಬಳಿ ನಿಲ್ಲಿಸದೇ ಮುಂದೆ, ಹಿಂದೆ ನಿಲ್ಲಿಸುತ್ತಿರುವುದರಿಂದ ನಿತ್ಯ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರ ಕೂಡಲಸಂಗಮ ಕ್ರಾಸ್, ಕೂಡಲಸಂಗಮ ಪುನರ್ ವಸತಿ ಕೇಂದ್ರ, ಕೂಡಲಸಂಗಮ ಬಳಿ ಬಸ್ ನಿಲ್ಲಲು ಒಂದು ನಿರ್ಧಿಷ್ಟ ಸ್ಥಳ ಇಲ್ಲದೇ ಚಾಲಕರು ಒಂದೊಂದು ಕಡೆ ಬಸ್‌ಗಳನ್ನು ನಿಲ್ಲಿಸುವರು.
ಕಜಗಲ್ಲ ಬಳಿ ನಿರ್ಮಾಣವಾದ ಬಸ್ ತಂಗುದಾಣ ಕೆಲವು ಕಡೆ ಬಿದ್ದಿದ್ದು, ಛಾವಣಿ ಸಹ ಕುಸಿದಿದೆ. ಕೂಡಲಸಂಗಮ, ಕೂಡಲಸಂಗಮ ಪುನರ್ ವಸತಿ ಕೇಂದ್ರ, ಅರ್ಚಕ ಕಾಲೊನಿ, ವರಗೋಡದಿನ್ನಿ ಬಸ್ ತಂಗುದಾಣಗಳು ಕಸದ ರಾಶಿ, ಮದ್ಯದ ಬಾಟಲಿಯಿಂದ ತುಂಬಿವೆ.
ರಾಷ್ಟ್ರೀಯ ಹೆದ್ದಾರಿ 50ರ ಸಂಗಮ ಕ್ರಾಸ್ ಬಳಿ ಬಸ್ ತಂಗುದಾಣ ಇಲ್ಲದಿರುವುದರಿಂದ ಕ್ರಾಸ್‌ದಿಂದ 200 ಮೀಟರ್ ದೂರದಲ್ಲಿರುವ ಆಲಮಟ್ಟಿ ಮಾರ್ಗದಲ್ಲಿವೆ. ಈ ಸ್ಥಳಗಳಲ್ಲಿ ಬಸ್‌ಗಳು ನಿಲ್ಲದಿರುವುದರಿಂದ ಜನರು ಪರದಾಡುವಂತಾಗಿದೆ.
ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ರಸ್ತೆ ಬದಿಯ ಪುಟ್‌ಪಾತ್‌ನಲ್ಲಿ ನಿಂತು ಬಸ್ ಏರುವರು. ಬಸ್ ಬರುವವರೆಗೂ ಬಿಸಿಲಿನಲ್ಲಿಯೇ ನಿಲ್ಲುವರು. ಮಳೆಗಾಲದಲ್ಲಿ ರಸ್ತೆ ಬದಿಯ ಅಂಗಡಿಗಳಲ್ಲಿ ಆಶ್ರಯ ಪಡೆಯಬೇಕು. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಪ್ರಯಾಣಿಕರು ಬಸ್ ಬರುವವರೆಗೆ ವಿಶ್ರಾಂತಿ ಪಡೆಯಲು, ಬಿಸಿಲು, ಮಳೆಯಿಂದ ತೊಂದರೆ ಆಗಬಾರದು ಎಂದು ನಿರ್ಮಿಸಿದ ಬಸ್ ತಂಗುದಾಣಗಳು ನಿರುಪಯುಕ್ತವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ವಚ್ಚತೆ ಮಾಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರು ಬಸ್ ತಂಗುದಾಣ ಇರುವಲ್ಲಿಯೇ ಬಸ್‌ಗಳನ್ನು ನಿಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಹೊಸಪೇಟೆ ಪ್ರವಾಸಿ ಶಂಕರ ಪಾಟೀಲ ಹೇಳಿದರು.
ಹೂವನೂರ, ಚವಡಕಮಲದಿನ್ನಿ, ಬಿಸಲದಿನ್ನಿ, ವಳಕಲದಿನ್ನಿ ಬಳಿ ಬಸ್ ತಂಗುದಾಣಗಳೇ ಇಲ್ಲ. ಬಸ್ ವೇಳೆ ತಿಳಿಸಲು ಸಾರಿಗೆ ಸಂಸ್ಥೆಯ ಸಿಬ್ಬಂದಿ ಇಲ್ಲದ ಕಾರಣ ಕೂಡಲಸಂಗಮದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವರು.
ಬಸ್ ತಂಗುದಾಣಗಳು ನಿರುಪಯುಕ್ತವಾಗಿದ್ದು ಪ್ರವಾಸಿಗರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವರು. ಸಂಬಂಧಿಸಿದ ಅಧಿಕಾರಿಗಳು ಬಸ್ ತಂಗುದಾಣ ವೀಕ್ಷಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.ಕರಸಂಗಯ್ಯ ಗುಡಿ ನಿವಾಸಿ ಕೂಡಲಸಂಗಮ
ಬಸ್ ತಂಗುದಾಣದ ಬಳಿಯೇ ಬಸ್ ನಿಲ್ಲಿಸುವಂತೆ ಚಾಲಕರಿಗೆ ಘಟಕ ವ್ಯವಸ್ಥಾಪಕರು ಸೂಚಿಸಬೇಕು. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಕೂಡಲಸಂಗಮದಲ್ಲಿ ಇಂತಹ ತೊಂದರೆ ಇದ್ದರೆ ಹೇಗೆ?ಸಹನಾ ಎನ್ ಬೆಂಗಳೂರು ಪ್ರವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.