
ರಬಕವಿ ಬನಹಟ್ಟಿ: ಕಟ್ಟಡ ಕಾರ್ಮಿಕರಿಗೆ ಸೇರಿದಂತೆ ಇನ್ನಿತರ ವಲಯಗಳ ಕಾರ್ಮಿಕ ವರ್ಗದವರು ಕಾರ್ಮಿಕ ಇಲಾಖೆಯ ಸೌಲಭ್ಯ ಪಡೆದುಕೊಂಡು ಗೌರವಯುತ ಜೀವನ ನಡೆಸಬೇಕು. ಕಾರ್ಮಿಕ ಇಲಾಖೆ ಸೌಲಭ್ಯ ಪಡೆದುಕೊಳ್ಳಬೇಕಾದರೆ ಸೂಕ್ತ ದಾಖಲೆಗಳನ್ನು ಒದಗಿಸಿ ನೋಂದಣಿ ಮಾಡಿಸಬೇಕು ಎಂದು ರಬಕವಿ ಬನಹಟ್ಟಿ ತಾಲ್ಲೂಕು ಕಾರ್ಮಿಕ ಇಲಾಖೆ ವೃತ್ತ ನಿರೀಕ್ಷಕ ರಮೇಶ ವಂಗಿ ತಿಳಿಸಿದರು.
ಬುಧವಾರ ಇಲ್ಲಿನ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಮಿಕ ಇಲಾಖೆಯ ಸ್ಮಾರ್ಟ್ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದರು.
ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆ ಸೃಷ್ಠಿಸಿ ಮಂಡಳಿಯು ನೀಡುವ ಗುರುತಿನ ಚೀಟಿ ಪಡೆದುಕೊಂಡು ಇಲಾಖೆಯ ಸೌಲಭ್ಯ ಪಡೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಲಾಖೆಯ ನೋಂದಾಯಿತ ಫಲಾನುಭವಿಗಳು ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್ ಕಿಟ್ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯ ಧನ, ಅಪಘಾತ ಪರಿಹಾರ, ಪ್ರಮುಖ ವೈದ್ಕಕೀಯ ಸಹಾಯ ಮದುವೆ ಸಹಾಯ ಧನ ಮತ್ತು ತಾಯಿ ಮಗು ಸಹಾಯ ಹಸ್ತ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಕಾರ್ಮಿಕ ಕಾರ್ಡ್ ಸೌಲಭ್ಯವನ್ನು ಪಡೆದುಕೊಂಡ ಕಾರ್ಮಿಕರು ಬೇರೆಯವರಿಗೂ ಕೂಡಾ ಈ ಕುರಿತು ಜಾಗೃತಿಯನ್ನು ಮೂಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ರಮೇಶ ವಂಗಿ ತಿಳಿಸಿದರು.
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಕಾರ್ಮಿಕರು ಹೆಚ್ಚಿನ ಮಾಹಿತಿಗಾಗಿ ಕಚೇರಿಗಳನ್ನು ಸಂಪರ್ಕಿಸಬೇಕು ಮತ್ತು ಸಹಾಯವಾಣಿ ಸಂಖ್ಯೆ 155214 ಸಂಪರ್ಕಿಸಬೇಕು ಎಂದು ತಿಳಿಸಿದರು.
ನಿಂಗಪ್ಪ ಗೋಕಾವಿ, ಸಂಗಪ್ಪ ಉದಗಟ್ಟಿ, ರಾಜೇಂದ್ರ ಮಿರ್ಜಿ, ಗಂಗಪ್ಪ ಒಂಟಗುಡಿ, ಬಸು ಜಮಖಂಡಿ, ಈರಪ್ಪ ಮಡಿವಾಳ, ಕಾಡಪ್ಪ ಬಡೇಮಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.