ಬಾಗಲಕೋಟೆ: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಕಾನೂನು ಸಲಹೆ ಮತ್ತು ಸೇವೆಗಳನ್ನು ಒದಗಿಸುವ ಸಲುವಾಗಿ ಕಾನೂನು ಸಲಹಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ್ ಹೇಳಿದರು.
ರಾಜ್ಯದಲ್ಲಿಯೇ ಪ್ರಥಮ ಬಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಕಾನೂನು ಸೇವಾ ಕೇಂದ್ರಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾಡಳಿತ ಭವನಕ್ಕೆ ಕಚೇರಿ ಕೆಲಸದ ನಿಮಿತ್ಯ ರೈತರು, ಮಹಿಳೆಯರು, ವಯೋವೃದ್ದರು, ಆರ್ಥಿಕ ದುರ್ಲಬರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಜನರು ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಆರಂಭಿಸಲಾಗಿದೆ ಎಂದರು.
ಆಯಾ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಜಿಲ್ಲಾ ಕಾರಾಗೃಹದಲ್ಲಿಯೂ ಸಹ ಕಾನೂನು ಸಲಹಾ ಕೇಂದ್ರಗಳನ್ನು ಆರಂಭಿಸಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 15100 ಗೆ ಸಹ ಕರೆ ಮಾಡಿ ಕಾನೂನು ಸಲಹೆ ಪಡೆಯಬಹುದಾಗಿರುತ್ತದೆ ಎಂದು ಹೇಳಿದರು.
ಯಾರೂ ನ್ಯಾಯ ಪಡೆಯುವುದರಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಕಾನೂನು ಸೇವೆ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ. ಜನರಲ್ಲಿ ಕಾನೂನಿನ ಅರಿವು ಮತ್ತು ನೆರವು ನೀಡುವುದು ಪ್ರಾಧಿಕಾರದ ಉದ್ದೇಶವಾಗಿದೆ ಎಂದರು.
ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಗದ್ದಿ, ಕಾನೂನು ನೆರವು ಅಭಿರಕ್ಷಕರ ಕಚೇರಿಯ ವಕೀಲರಾದ ಎಂ.ಎಂ.ಕಂದಗಲ್, ಪ್ರಶಾಂತ ನಾರಾಯಣಕರ, ಪ್ರವೀಣ ಕಮ್ಮಾರ, ವಿಜಯಕುಮಾರ ಬೇವಿನಕಟ್ಟಿ, ಅಕ್ಷತಾ ದೇವರೆಡ್ಡಿ, ಪೂಜಾ ಭಾರಟಕ್ಕೆ ಹಾಗು ಪ್ಯಾನೆಲ್ ವಕೀಲರಾದ ಗೀತಾ ಪಾಟೀಲ ಉಪಸ್ಥಿತರಿದ್ದರು.
ಈ ಕೇಂದ್ರಗಳಲ್ಲಿ ಕೃಷಿ ಮಹಿಳೆಯರ ಹಕ್ಕು ಕುಟುಂಬ ಕಲಹ ವ್ಯಾಜ್ಯ ಹಿರಿಯ ನಾಗರಿಕರ ಹಕ್ಕು ಕಾರ್ಮಿಕರ ಕಾಯ್ದೆ ಅಪರಾಧ ದೌರ್ಜನ್ಯ ಭೂ-ವ್ಯಾಜ್ಯ ಪ್ರಕರಣಗಳು ಭೂ ಸುಧಾರಣೆ ಪ್ರಕರಣಗಳು ಭೂ ಮಂಜೂರಾತಿ ಪ್ರಕರಣಗಳು ಭೂ ಪರಭಾರೆ ನಿಷೇಧ ಪ್ರಕರಣಗಳು ಭೂ ಸ್ವಾಧೀನ ಪ್ರಕರಣಗಳು ಭೂ ಮೇಲ್ಮನವಿ ಪ್ರಕರಣಗಳು ಭೂ ಒತ್ತುವರಿ ಪ್ರಕರಣಗಳು ಹಕ್ಕು ಪತ್ರ ಪ್ರಕರಣಗಳು ಪಿಂಚಣಿ ಸೌಲಭ್ಯ ಸೇರಿದಂತೆ ಇತರ ಸಮಸ್ಯೆಗಳ ಕುರಿತು ಕಾನೂನು ಸಲಹೆ ಹಾಗೂ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.