ADVERTISEMENT

ಚುಡಾಯಿಸಬೇಡ ಎಂದಿದ್ದಕ್ಕೆ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

₹4 ಲಕ್ಷ ಪರಿಹಾರ ನೀಡಲು ಆದೇಶ: ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:38 IST
Last Updated 7 ಜನವರಿ 2026, 6:38 IST
   

ಬಾಗಲಕೋಟೆ: ಮಗಳನ್ನು ಚುಡಾಯಿಸಬೇಡ ಎಂದು ಹೇಳಿದ ತಂದೆಯನ್ನೇ ಕೊಲೆ ಮಾಡಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್‌.ವಿ. ವಿಜಯ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಭಗವತಿಯ ಪ್ರವೀಣಕುಮಾರ ಕಾಂಬ್ಳೆ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ. ಜೊತೆಗೆ ₹5 ಸಾವಿರ ದಂಡ ವಿಧಿಸಲಾಗಿದೆ. ಮೃತ ಸಂಗನಗೌಡ ಅವರ ಮಕ್ಕಳಿಗೆ ₹4 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ.

ಸಂಗನಗೌಡರ ಪುತ್ರಿಯನ್ನು ಅವರ ಮನೆ ಬಳಿಯೇ ಇದ್ದ ಅಪರಾಧಿ ಪ್ರವೀಣಕುಮಾರ ಚುಡಾಯಿಸುತ್ತಿದ್ದನು. ಕಾಲೇಜಿಗೆ ಹೋಗುವಾಗ, ಬರುವಾಗ ಬೆನ್ನು ಹತ್ತಿ ಹೋಗುವುದು, ಪ್ರೀತಿ ಮಾಡು ಎನ್ನುವುದು, ಕಾಡಿಸುವುದು ಮಾಡುತ್ತಿದ್ದನು.

ADVERTISEMENT

ವಿಷಯ ತಿಳಿದ ಸಂಗನೌಡ, ಅಪರಾಧಿಗೆ ಮಗಳ ತಂಟೆಗೆ ಬರಬೇಡ ಎಂದು ಬುದ್ಧಿ ಹೇಳಿದ್ದರು. ಆದರೂ, ಚುಡಾಯಿಸುವುದನ್ನು ನಿಲ್ಲಿಸಿರಲಿಲ್ಲ. ಕೊನೆಗೆ ಬೇಸತ್ತ ಅವರು, ಕೆಲವರ ಸಮ್ಮುಖದಲ್ಲಿ ಮಗಳ ತಂಟೆಗೆ ಬರಬೇಡ. ಬಂದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದರು.

ಇದಾದ ನಂತರ ಅಪರಾಧಿ ಕೆಲ ತಿಂಗಳು ಊರು ಬಿಟ್ಟು ಹೋಗಿದ್ದನು. ಮತ್ತೇ ವಾಪಸ್ ಬಂದ ಮೇಲೆ ಹಿಂದಿನ ಚಾಳಿಯನ್ನೇ ಮುಂದುವರೆಸಿದ್ದನು. ಜೊತೆಗೆ ಕುತ್ತಿಗೆ ಮುಂಭಾಗದಲ್ಲಿ ಸಂಗನಗೌಡರ ಮಗಳ ಹೆಸರಿನ ಮೊದಲ ಅಕ್ಷರವನ್ನು ಹಚ್ಚೆ ಹಾಕಿಸಿಕೊಂಡಿದ್ದನು. ಊರಲ್ಲಿ ಪ್ರೀತಿ ಮಾಡುತ್ತಿದ್ದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದನು.

ಒಂದು ಸಲ ಹೇಳಿದರೆ ಬುದ್ಧಿ ಬಂದಿಲ್ಲ. ಮತ್ತೆ ಕಾಡುತ್ತಿರುವೆ ಎಂದು ಸಂಗನಗೌಡರು ಕೇಳಿದಾಗ, ಅಪರಾಧಿಯು ನಿಮ್ಮ ಮಗಳನ್ನು ಪ್ರೀತಿ ಮಾಡುತ್ತಿದ್ದೇನೆ. ಪ್ರೀತಿಗೆ ಅಡ್ಡ ಬರುವ ನಿನಗೆ ಒಂದು ಗತಿ ಕಣಿಸುತ್ತೇನೆ ಎಂದಿದ್ದನು.

ಅದೇ ದಿನ ಮಧ್ಯಾಹ್ನ ಸರ್ಕಾರಿ ಪಶು ಆಸ್ಪತ್ರೆ ಬಳಿ ಇರುವ ಬೇವಿನಗಿಡದ ಕಟ್ಟೆ ಮೇಲೆ ಕುಳಿತಿದ್ದ ಸಂಗನಗೌಡರನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ಕೊಯಿತಾದಿಂದ ತಲೆ, ಕೈ, ಬೆನ್ನಿಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದನು. ಬಿಡಿಸಿಕೊಳ್ಳಲು ಬಂದ ಮಗಳಿಗೂ ನಿನ್ನ ತಂದೆಗೆ ಆದ ಗತಿ ಆಗುತ್ತದೆ ಎಂದು ಬೆದರಿಕೆ ಹಾಕಿದ್ದನು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಂಗನಗೌಡರು ಮೃತರಾಗಿದ್ದರು.

ಅಂದಿನ ತನಿಖಾಧಿಕಾರಿ ಸಿಪಿಐ ಎಚ್‌.ಆರ್‌. ಪಾಟೀಲ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ಆರ್. ಫರಾಸ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.