ADVERTISEMENT

ಪಂಚಮಸಾಲಿ ಮಠಾಧೀಶರ ಒಕ್ಕೂಟ: ಶಾಸಕ ಯತ್ನಾಳ ಕಿಡಿ

ಮೋದಿ ವಿರುದ್ಧ ವಿರೋಧ ಪಕ್ಷಗಳ ಹೋರಾಟದಂತೆ: ಬಣ್ಣನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 16:08 IST
Last Updated 9 ಡಿಸೆಂಬರ್ 2021, 16:08 IST
ಬಸವನಗೌಡ ಪಾಟೀಲ ಯತ್ನಾಳ
ಬಸವನಗೌಡ ಪಾಟೀಲ ಯತ್ನಾಳ    

ಬಾಗಲಕೋಟೆ: ‘ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೇಶದ ಎಲ್ಲ 24 ಪಕ್ಷಗಳು ಸೇರಿ ಹೋರಾಟ ಮಾಡಿದಂತೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿಮಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸಮುದಾಯದ ಮಠಾಧೀಶರು ಒಕ್ಕೂಟ ಮಾಡಿಕೊಂಡು ಮುಗಿಬಿದ್ದಿದ್ದಾರೆ’ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಹೋರಾಟ ನಡೆಸುತ್ತಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಜನಪ್ರಿಯತೆ ಬಗ್ಗೆಭಯಬಂದು ಎಲ್ಲರೂ ಕೂಡಿ ಒಕ್ಕೂಟ ಮಾಡಿಕೊಂಡಿದ್ದಾರೆ. ಇದು ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್, ಕಮ್ಯುನಿಸ್ಟರು, ಜನತಾದಳದವರು ಒಂದಾದಂತೆ. ಆದರೆ, ಶಿಷ್ಟಶಕ್ತಿಯ ವಿರುದ್ಧ ನಡೆದ ಯಾವುದೇ ಹೋರಾಟ ಯಶಸ್ವಿಯಾಗಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

‘ಸ್ವಾಮೀಜಿಗಳ ಒಕ್ಕೂಟ ಯಾವುದಕ್ಕೆ ಬೇಕು. ಅವರಲ್ಲಿ ಯಾರು ಮೀಸಲಾತಿಗಾಗಿ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಬದಲಿಗೆ ಮಠಕ್ಕೆ ಅನುದಾನ ಕೇಳಲು, ಧ್ವನಿ ಸುರಳಿ, ಲಾಂಛನ ಬಿಡುಗಡೆ ಮಾಡಿಸಲು ಮುಖ್ಯಮಂತ್ರಿ ಬಳಿ ಹೋಗುತ್ತಾರೆ. ಲಾಂಛನ ಬಿಡುಗಡೆ ಮಾಡುವುದು ಮುಖ್ಯಮಂತ್ರಿ ಕೆಲಸ ಅಲ್ಲ. ಮಠಾಧೀಶರ ಕೆಲಸ. ಐಷಾರಾಮಿ ಜೀವನಕ್ಕಾಗಿ ಮುಖ್ಯಮಂತ್ರಿ ಬಳಿ ಹೋಗುವ ನಿಮ್ಮ ಲಾಂಛನ ತೆಗೆದುಕೊಂಡು ಬೆಂಕಿ ಹಚ್ಚುವುದಾ?’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಪಂಚಮಸಾಲಿ ಮಠಾಧೀಶರ ಒಕ್ಕೂಟದ ಹಿಂದೆ ನಿಮ್ಮ (ಬಾಗಲಕೋಟೆ) ಜಿಲ್ಲೆ ರಾಜಕಾರಣಿಗಳೇ ಇದ್ದಾರೆ. ಅವರು ಮೊದಲಿನಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಪಂಚಮಸಾಲಿಯವರೇ ಪಂಚಮಸಾಲಿಗಳಿಗೆ ವಿರೋಧಿಗಳು. ಸಮಾಜವನ್ನು ಮೂರಾಬಟ್ಟೆ ಮಾಡಿದಂತೆ ಅವರೂ ಮೂರಾಬಟ್ಟೆ ಆಗುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

‘ಸಂಪುಟ ವಿಸ್ತರಣೆಯಲ್ಲಿ ಮಗನಿಗೆ ಸಚಿವ ಸ್ಥಾನ ಕೊಡಿಸಲುಯಡಿಯೂರಪ್ಪ ಮನೆಯಲ್ಲಿ ಕುಳಿತು ಲಾಬಿ ಮಾಡುತ್ತಿದ್ದಾರೊ, ಏನು ಮಾಡುತ್ತಿದ್ದಾರೊ ಗೊತ್ತಿಲ್ಲ. ನಾನು ಮೊದಲಿನಿಂದಲೂ ಕುಟುಂಬ ರಾಜಕಾರಣದ ವಿರುದ್ಧ ಇದ್ದೀನಿ’ ಎಂದರು.

‘ಅಪ್ಪ, ಮಕ್ಕಳು, ಮೊಮ್ಮಕ್ಕಳು ಎಲ್ಲರಿಗೂ ಎಂಎಲ್‌ಎ, ಎಂಪಿ ಮಾಡಲು ದೇವೇಗೌಡರ ಪಕ್ಷ, ಲಾಲೂಪ್ರಸಾದ, ಮುಲಾಯಂಸಿಂಗ್ ಯಾದವ್, ಕಾಂಗ್ರೆಸ್‌ನಲ್ಲಿ ಅವಕಾಶ ಇದೆ. ಬಿಜೆಪಿಯಲ್ಲಿ ಹೈಕಮಾಂಡ್ ಆ ಅವಕಾಶ ಕೊಡೊದಿಲ್ಲ ಎಂಬ ವಿಶ್ವಾಸವಿದೆ. ನಾಚಿಕೆ ಆಗಬೇಕು. ಇದೇನು ರಾಜ–ಮಹಾರಾಜರ ಕಾಲ ಅಲ್ಲ. ಮನೆಯಲ್ಲಿ ಒಬ್ಬರುರಾಜಕಾರಣ ಮಾಡಲಿ’ ಎಂದರು.

‘ಕುಟುಂಬ ರಾಜಕಾರಣದ ವಿರುದ್ಧ ದನಿ ಎತ್ತಿದ್ದಕ್ಕೆ ವಿರೋಧಿಗಳು ಈ ಹಿಂದೆ ನಿಮ್ಮ ವಿರುದ್ಧ ಮುಗಿಬಿದ್ದಿದ್ದರಲ್ಲಾ?’ ಎಂಬ ಪ್ರಶ್ನೆಗೆ ‘ಅಂಜುತ್ತೇನೆ ಏನ್ರಿ ನಾನು..? ಯಡಿಯೂರಪ್ಪನಿಗೆ ಅಂಜಿಲ್ಲ. ಯಾರಿಗೂ ಅಂಜುವ ಪ್ರಶ್ನೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.