ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲೇ ಮೂವರು ಮಹಿಳೆಯರ ನಡುವೆ ಪೈಪೋಟಿ ಏರ್ಪಟ್ಟಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮತ್ತೆ ಆಕಾಂಕ್ಷಿಯಾಗಿದ್ದರೆ, ಅವರಿಗೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಮತ್ತು ಸಚಿವ ಶಿವಾನಂದ ಪಾಟೀಲ ಪುತ್ರಿ, ಸಂಯುಕ್ತಾ ಪಾಟೀಲ ಪೈಪೋಟಿ ಒಡ್ಡಿದ್ದಾರೆ.
ವೀಣಾ ಕಾಶಪ್ಪನವರ ಪತಿ ವಿಜಯಾನಂದ ಕಾಶಪ್ಪನವರ ಹುನಗುಂದ ಕ್ಷೇತ್ರದ ಶಾಸಕ. ಜೊತೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ. ‘ಪತ್ನಿಗೆ ಟಿಕೆಟ್ ನೀಡಿ’ ಎಂದು ಕೋರಿ ಕೊಡಿಸಲು ಹೈಕಮಾಂಡ್ ನಾಯಕರು, ಮುಖ್ಯಮಂತ್ರಿ ಸೇರಿ ಎಲ್ಲರನ್ನೂ ಭೇಟಿಯಾಗಿದ್ದಾರೆ.
ಸಂಯುಕ್ತಾ ಪಾಟೀಲ ಪರ ಅವರ ತಂದೆ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಜಿಲ್ಲೆಯ ಕೆಲವು ಮುಖಂಡರ ಒಪ್ಪಿಗೆಯೊಂದಿಗೆ ಪುತ್ರಿಗೆ ಟಿಕೆಟ್ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ.
ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಚಿವರ ಮಕ್ಕಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದು, ಅದೇ ರೀತಿ ಶಿವಾನಂದ ಪಾಟೀಲ ಅವರು ಪ್ರಯತ್ನ ಮುಂದುವರೆಸಿದ್ದಾರೆ. ಸ್ವಂತ ಜಿಲ್ಲೆ ವಿಜಯಪುರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕಾರಣ ಪಕ್ಕದ ಜಿಲ್ಲೆ ಬಾಗಲಕೋಟೆ ಕ್ಷೇತ್ರಕ್ಕೆ ಕಣ್ಣು ನೆಟ್ಟಿದ್ದಾರೆ. ಆದರೆ, ಇದಕ್ಕೆ ಜಿಲ್ಲೆಯಲ್ಲಿ ವಿರೋಧವಿದೆ.
ಕುರುಬ ಸಮುದಾಯದ ರಕ್ಷಿತಾ ಈಟಿ ಸಮುದಾಯದ ಮುಖಂಡರ ಮೂಲಕ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ, ಅವರಿಬ್ಬರ ಅಬ್ಬರದಲ್ಲಿ ಇವರ ಹೆಸರು ಸದ್ದು ಮಾಡುತ್ತಿಲ್ಲ.
ಮಾಜಿ ಸಂಸದ ಅಜಯಕುಮಾರ ಸರನಾಯಕ ಹೆಸರೂ ಕೇಳಿ ಬಂದಿತ್ತು. ನಂತರದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಹೆಸರೂ ಓಡಾಡಿತು. ಈಗ ಮಹಿಳೆಯರ ಹೆಸರುಗಳೇ ಮುಂಚೂಣಿಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.