ADVERTISEMENT

ಬಾಗಲಕೋಟೆ: ಮತ್ತೆ ಕಾಣಿಸಿಕೊಂಡ ಚರ್ಮಗಂಟು ರೋಗ

ಬಸವರಾಜ ಹವಾಲ್ದಾರ
Published 25 ಸೆಪ್ಟೆಂಬರ್ 2023, 4:57 IST
Last Updated 25 ಸೆಪ್ಟೆಂಬರ್ 2023, 4:57 IST
ಚರ್ಮಗಂಟು ರೋಗದಿಂದ ಬಳಲುತ್ತಿರುವ ಜಾನುವಾರು
ಚರ್ಮಗಂಟು ರೋಗದಿಂದ ಬಳಲುತ್ತಿರುವ ಜಾನುವಾರು   

ಬಾಗಲಕೋಟೆ: ಕಳೆದ ವರ್ಷ 1,607 ಜಾನುವಾರುಗಳ ಪ್ರಾಣಕ್ಕೆ ಸಂಚಾರ ತಂದೊಡ್ಡುವ ಮೂಲಕ ರೈತರಿಗೆ ಬಹುದೊಡ್ಡ ಸಂಕಷ್ಟ ತಂದೊಡ್ಡಿದ್ದ ಚರ್ಮಗಂಟು ರೋಗ (ಲಂಪಿಸ್ಕಿನ್‌ ಡಿಸೀಸ್‌) ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಮತ್ತೇ ಕಾಣಿಸಿಕೊಂಡಿದೆ.

ರಬಕವಿ–ಬನಹಟ್ಟಿ, ಮುಧೋಳ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಈಗಾಗಲೇ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ರಬಕವಿ–ಬನಹಟ್ಟಿ ತಾಲ್ಲೂಕಿನಲ್ಲಿ ಐದಕ್ಕೂ ಹೆಚ್ಚು ಹಳ್ಳಿಗಳಲ್ಲಿ ಒಂಬತ್ತು ಜಾನುವಾರುಗಳಿಗೆ, ಮುಧೋಳ ತಾಲ್ಲೂಕಿನ ಎರಡು ಜಾನುವಾರುಗಳಿಗೆ ಕಾಣಿಸಿಕೊಂಡಿದೆ.

ಕಳೆದ ವರ್ಷ ಚರ್ಮಗಂಟು ರೋಗದಿಂದ ಹಾಲಿನ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗಿದ್ದು, ಜತೆಗೆ ಸಾವಿರಾರು ಜಾನುವಾರುಗಳ ಸಾವಿನಿಂದ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಕಾಣಿಸಿಕೊಂಡಿದೆ.

ADVERTISEMENT

ಪಶು ಆಸ್ಪತ್ರೆಗಳಲ್ಲಿ ಚಿಕಿತ್ಸೆ  ಆರಂಭಿಸಲಾಗಿದೆ. ರೋಗ ಕಾಣಿಸಿಕೊಂಡ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗಿದೆ. ಜೊತೆಗೆ ರೈತರಲ್ಲೂ ಜಾಗೃತಿ ಮೂಡಿಸುವ ಕೆಲಸ ನಡೆದಿದೆ.

ಕಳೆದ ವರ್ಷ ಜಿಲ್ಲೆಯ 538 ಗ್ರಾಮಗಳ 15,721 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿತ್ತು. ಅದರಲ್ಲಿ 1,607 ಜಾನುವಾರುಗಳು ಮೃತಪಟ್ಟು, 14,070 ಜಾನುವಾರುಗಳು ಗುಣಮುಖವಾಗಿದ್ದವು.

ಬಿಡಾಡಿ ದನಗಳಿಂದ ಅಪಾಯ: ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಿದೆ. ಅವುಗಳು ಊರ ತುಂಬಾ ತಿರುಗಾಡುವುದರಿಂದ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಅವುಗಳು ಇತರ ಜಾನುವಾರುಗಳಿಗೂ ಹರಡಬಲ್ಲವು. ಅವುಗಳ ಮೇಲೂ ನಿಗಾ ಇರಿಸಬೇಕಿದೆ.

‘ಆಕಳು, ಎತ್ತು, ಹೋರಿಗಳಲ್ಲಿ ಈ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಎಮ್ಮೆಗಳಿಗೆ ಕಾಣಿಸಿಕೊಂಡಿಲ್ಲ. ರೈತರು ಜಾನುವಾರುಗಳ ಮೇಲೆ ನಿಗಾ ಇಟ್ಟಿರಬೇಕು. ರೋಗದ ಲಕ್ಷಣ ಕಂಡ ಬಂದ ಕೂಡಲೇ ಚಿಕಿತ್ಸೆ ಕೊಡಿಸಬೇಕು’ ಎಂದು ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಶಿವಾನಂದ ಕರಡಿಗುಡ್ಡ ತಿಳಿಸಿದರು.

‘ಜಿಲ್ಲೆಯಲ್ಲಿ 2.22 ಲಕ್ಷ ಎತ್ತು, ಆಕಳು, ಕರುಗಳಿವೆ. ಅವುಗಳ ಪೈಕಿ ಈಗಾಗಲೇ 2.10 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ರೋಗ ಕಾಣಿಸಿದ ಮೇಲೆ ಮತ್ತೆ ಲಸಿಕೆ ಹಾಕುವ ಕಾರ್ಯ ಆರಂಭಿಸಲಾಗಿದೆ. 25 ಸಾವಿರ ಲಸಿಕೆಗಳು ಲಭ್ಯವಿದ್ದು, ರೋಗ ಕಾಣಿಸಿಕೊಂಡ ತಾಲ್ಲೂಕು ಸೇರಿದಂತೆ ಎಲ್ಲ ತಾಲ್ಲೂಕುಗಳಿಗೆ ಲಸಿಕೆ ವಿತರಿಸಲಾಗಿದೆ’ ಎಂದರು.

ಆಕಳು ಸಾಕಿರುವ ಹಲವಾರು ಕುಟುಂಬಗಳು ಅವುಗಳ ನೀಡುವ ಹಾಲಿನ ಮೇಲೆಯೇ ಅವಲಂಬನೆಯಾಗಿವೆ. ಚರ್ಮಗಂಟು ರೋಗ ಬಂದರೆ ಹಾಲು ನೀಡುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದಾಗಿ ಅವುಗಳ ಆದಾಯವೂ ಕುಸಿತವಾಗುತ್ತದೆ.

ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ಬಹುತೇಕ ಬೆಳೆಗಳು ಹಾನಿಯಾಗಿವೆ. ಮೇವಿನ ಕೊರತೆ ರೈತರನ್ನು ಕಾಡುತ್ತಿದೆ. ಅಂತಹ ಸಂದರ್ಭದಲ್ಲಿ ಚರ್ಮಗಂಟು ರೋಗ ಬಂದಿರುವುದು ರೈತ ಕುಟುಂಬಗಳು ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಸ್ಥಿತಿ ಎದುರಾಗಿದೆ.

ಸಿಬ್ಬಂದಿ ಕೊರತೆ: ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವೆ ಇಲಾಖೆಯು ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಜಿಲ್ಲಾ ಪಾಲಿ ಕ್ಲಿನಿಕ್‌, ತಾಲ್ಲೂಕು, ಹೋಬಳಿ, ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾಲಯ ಸೇರಿ ಒಟ್ಟು 147 ಚಿಕಿತ್ಸಾಲಯಗಳಿವೆ.  587 ಹುದ್ದೆಗಳ ಮಂಜೂರಾತಿ ಇದ್ದರೆ, ಅರ್ಧಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

ಚರ್ಮಗಂಟು ರೋಗಕ್ಕೆ ತುತ್ತಾದ ಹಸು (ಸಾಂದರ್ಭಿಕ ಚಿತ್ರ)
ರಸ್ತೆಯಲ್ಲಿ ಸಂಚರಿಸುತ್ತಿರುವ ಬಿಡಾಡಿ ದನಗಳು

ರೋಗದ ಲಕ್ಷಣಗಳು

  • ಅತಿಯಾದ ಜ್ವರ (105–108 ಸೆಲ್ಸಿಯಸ್)

  • ಕಣ್ಣುಗಳಿಂದ ನೀರು ಸೋರುವುದು

  • ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು

  • ಚರ್ಮದ ಮೇಲೆ 2 ರಿಂದ 5 ಸೆ.ಮೀ. ಅಗಲದ ಗುಳ್ಳೆ ಕಾಣಿಸಿಕೊಂಡು ಒಡೆದು ಗಾಯವಾಗುತ್ತದೆ.

  • ಹಾಲಿನ ಇಳುವರಿ ಕಡಿಮೆಯಾಗುವುದು ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ

  • ಎತ್ತುಗಳು ಹೆಚ್ಚು ಬಳಲುವುದರಿಂದ ಕೆಲಸದ ಸಾಮರ್ಥ್ಯ ಕುಂಠಿತವಾಗುತ್ತದೆ.

ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ

  • ರೋಗದ ಲಕ್ಷಣಗಳ ಆಧರಿಸಿ ಚಿಕಿತ್ಸೆ

  • ದೇಹ ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು

  • ಗಾಯಗಳಿಗೆ ಪೋಟ್ಯಾಷಿಯಂ ಪರಮ್ಯಾಂಗನೇಟ್‌ ದ್ರಾವಣದಿಂದ ತೊಳೆದು ಅಯೋಡಿನ್ ದ್ರಾವಣ ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು.

  • ರೋಗ ಬಂದ ಜಾನುವಾರುಗಳನ್ನು ಬೇರ್ಪಡಿಸಬೇಕು

  • ಹಸಿರು ಮೇವು ಪೌಷ್ಟಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು

  • ಕುಡಿಯುವ ನೀರಿನಲ್ಲಿ ಬೆಲ್ಲ ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 5–6 ಬಾರಿ ಕುಡಿಸಬೇಕು.

  • ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಹೊಗೆ ಹಾಕಬೇಕು

ಜಾನುವಾರು ಸಂತೆ ಜಾತ್ರೆ ನಿಷೇಧ
ಚರ್ಮಗಂಟು ರೋಗ ಸಾಂಕ್ರಾಮಿಕವಾಗಿ ಹರಡುವುದರಿಂದ ಜಿಲ್ಲೆಯಲ್ಲಿನ ಎಲ್ಲ ಜಾನುವಾರುಗಳ ಸಂತೆ ಜಾತ್ರೆ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಡಾ.ಶಿವಾನಂದ ಕರಡಿಗುಡ್ಡ ತಿಳಿಸಿದರು. ಅಮೀನಗಡ ಕೆರೂರು ಬೇಲೂರು ಜಮಖಂಡಿ ಜಾಲಿಹಾಳ ಬೀಳಗಿ ಸೇರಿ ಹಲವೆಡೆ ಜಾನುವಾರು ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ. ಮುಂದಿನ ಆದೇಶದವರೆಗೆ ಸಂತೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ರೈತರಲ್ಲಿಯೂ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.