ADVERTISEMENT

ಮಹಾಲಿಂಗಪುರ: 25 ಟನ್ ಅಕ್ಕಿ ದೋಚಿದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:39 IST
Last Updated 25 ಜನವರಿ 2026, 4:39 IST
ಅಕ್ಕಿ ದೋಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಿಸಿದ ಸ್ಕಾರ್ಪಿಯೋ ವಾಹನದೊಂದಿಗೆ ಬಂಧಿಸಿದ ಮಹಾಲಿಂಗಪುರ ಪೊಲೀಸರು 
ಅಕ್ಕಿ ದೋಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಿಸಿದ ಸ್ಕಾರ್ಪಿಯೋ ವಾಹನದೊಂದಿಗೆ ಬಂಧಿಸಿದ ಮಹಾಲಿಂಗಪುರ ಪೊಲೀಸರು    

ಮಹಾಲಿಂಗಪುರ: ಸೈದಾಪುರ ಬಳಿ ಅಕ್ಕಿ ತುಂಬಿದ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ ₹6.12 ಲಕ್ಷ ಮೌಲ್ಯದ 25 ಟನ್ ಅಕ್ಕಿಯನ್ನು ದೋಚಿಕೊಂಡು ಪರಾರಿಯಾಗಿದ್ದ 8 ಜನ ಆರೋಪಿಗಳನ್ನು ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹3.90 ಲಕ್ಷ ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ, ಸ್ಕಾರ್ಪಿಯೋ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಜಮಖಂಡಿ ರುದ್ರಸ್ವಾಮಿ ಪೇಠದ ಸಂಜು ಕಡಕೋಳ (28), ವಿಶ್ವನಾಥ ಉರ್ಫ್ ಬುಲ್ಲಿ ಪ್ರಭುಲಿಂಗ ಲಗಳಿ (29), ಸಂತೋಷ ಕಾಂಬಳೆ (31), ಮೈಗೂರಿನ ಸಂಗಮೇಶ ಕಾಂಬಳೆ (39), ವಿಜಯಪುರದ ಜಾಕೀರ ಉರ್ಫ್ ಜಾಕೀರಹುಸೇನ ಬಾವಾ ಉರ್ಫ್ ಮಕಾಂದಾರ (26), ಫಯಾಜ ಮಕಾಂದಾರ (23), ಸಚಿನ್ ನಾಯಿಕೊಡಿ (25), ಅರ್ಪಾತ ತಾಳಿಕೋಟಿ (22) ಬಂಧಿತರು.

ಜ.10ರಂದು ಕಲಾದಗಿಯ ಬಾಬಾಸಾಬ ರಾಮದುರ್ಗ ಅವರು 25 ಟನ್ ಅಕ್ಕಿಯನ್ನು ಲಾರಿಯಲ್ಲಿ ತುಂಬಿಕೊಂಡು ಗಂಗಾವತಿಯಿಂದ ಕೊಲ್ಲಾಪುರಕ್ಕೆ ಹೊರಟಿದ್ದಾಗ ಇನ್ನೋವಾ ಹಾಗೂ ಸ್ಕಾರ್ಪಿಯೋದಲ್ಲಿ ಬಂದ ಆರೋಪಿಗಳು ಲಾರಿ ಅಡ್ಡಗಟ್ಟಿ ಚಾಲಕ ಬಾಬಾಸಾಬ ಅವರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲಿಂದ ಚಾಲಕ, ಅಕ್ಕಿ ಸಮೇತ ಲಾರಿಯನ್ನು ಅಪಹರಿಸಿ, ಕಾಗವಾಡ ಬಳಿ ಲಾರಿ ಹಾಗೂ ಚಾಲಕನನ್ನು ಬಿಟ್ಟು ಅಕ್ಕಿಯನ್ನು ದೋಚಿಕೊಂಡು ಹೋಗಿದ್ದರು.

ADVERTISEMENT

ಬಾಬಾಸಾಬ ರಾಮದುರ್ಗ ಅವರು ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ಸಿದ್ಧಾರ್ಥ ಗೋಯಲ್, ಡಿವೈಎಸ್ಪಿ ರೋಷನ್ ಜಮೀರ ಮಾರ್ಗದರ್ಶನದಲ್ಲಿ ಬನಹಟ್ಟಿ ಸಿಪಿಐ ಎಚ್.ಆರ್.ಪಾಟೀಲ ಅವರ ನೇತೃತ್ವದಲ್ಲಿ ತಂಡ ಎಂಟು ಜನರನ್ನು ಬಂಧಿಸಿದ್ದಾರೆ.

ಇನ್ನೋವಾ ವಾಹನದ ಮೇಲೆ ಎಸ್.ಕೆ ಎಂದು ಇಂಗ್ಲಿಷ್‍ನಲ್ಲಿ ಬರೆದ ಅಕ್ಷರದ ಜಾಡು ಹಿಡಿದ ಪೊಲೀಸ್ ತನಿಖಾ ತಂಡ ಜ.21ರಂದು ನಾಲ್ವರನ್ನು ಬಂಧಿಸಿ ಅಕ್ಕಿ ಮಾರಾಟ ಮಾಡಿ ಬಂದ ₹90 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ವಾಹನ ವಶಪಡಿಸಿಕೊಂಡಿದ್ದರು.

ಶನಿವಾರ ಮತ್ತೆ ನಾಲ್ವರನ್ನು ಬಂಧಿಸಿ ಅಕ್ಕಿ ಮಾರಾಟ ಮಾಡಿ ಬಂದ ₹3 ಲಕ್ಷ ಹಾಗೂ ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ವಾಹನ ವಶಪಡಿಸಿಕೊಂಡಿದ್ದಾರೆ.

ಪಿಎಸ್‍ಐ ಕಿರಣ ಸತ್ತಿಗೇರಿ, ತೇರದಾಳ ಪಿಎಸ್‍ಐ ಶಿವಾನಂದ ಸಿಂಗಣ್ಣವರ, ಸಿಬ್ಬಂದಿಗಳಾದ ಬಿ.ಜಿ. ದೇಸಾಯಿ, ಎ.ಎಂ.ಜಮಖಂಡಿ, ಬಸವರಾಜ ಮುದಿಬಸನಗೌಡ, ಎಸ್.ಡಿ. ಬಾಡಿಗಡದ, ಅಶೋಕ ಸವದಿ, ಐ.ಬಿ.ತೇಲಿ, ಜೆ.ಸಿ.ದಳವಾಯಿ, ಚಂದ್ರಶೇಖರ ಜಟ್ಟೆಪ್ಪಗೋಳ, ಕೆ.ಎನ್.ಲಮಾಣಿ, ಐ.ಎಸ್.ಇಂಗಳಗಾಂವಿ, ವಿಠ್ಠಲ ಮಾನೆ, ವಿಠ್ಠಲ ಬಳಗನ್ನವರ ತನಿಖಾ ತಂಡದಲ್ಲಿದ್ದರು.

ಶನಿವಾರ ನಾಲ್ವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನಿಬ್ಬರು ಆರೋಪಿಗಳಾದ ವಿಜಯಪುರದ ಸದ್ದಾಂ ಬಾವಾ ಉರ್ಫ್ ಮಕಾಂದಾರ ಹಾಗೂ ಬಾಗಲಕೋಟೆಯ ಖಾಜಾಅಮೀನ ಮುಲ್ಲಾ ಅವರು ಸೇರಿ ವಿಜಯಪುರ ಜಿಲ್ಲೆ ಹೊರ್ತಿ ಬಳಿ ಜ.12 ರಂದು ಇದೇ ರೀತಿ ಕೃತ್ಯ ಎಸಗಿರುವುದು ಹಾಗೂ ಪೊಲೀಸರು ವಶಕ್ಕೆ ಪಡೆದಿರುವ ಸ್ಕಾರ್ಪಿಯೋ ವಾಹನ ಬಳಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.