ಮಹಾಲಿಂಗಪುರ: ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ₹7.75 ಲಕ್ಷ ವೆಚ್ಚದಲ್ಲಿ ಕಳೆದ ವರ್ಷ ಪುರಸಭೆ ವತಿಯಿಂದ ಅಳವಡಿಸಿರುವ ಎಲ್‍ಇಡಿ ದೀಪಗಳಲ್ಲಿ ಕೆಲವು ನಿರ್ವಹಣೆ ಕೊರತೆಯಿಂದ ಬೆಳಗುತ್ತಿಲ್ಲ.
ಪುರಸಭೆಯ 15ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿ 1, 2, 3, 21, 22ನೇ ವಾರ್ಡ್‍ನ ಕೆಲವು ಪ್ರದೇಶಗಳಲ್ಲಿ 248 ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 50ಕ್ಕೂ ಹೆಚ್ಚು ದೀಪಗಳು ಬೆಳಗುತ್ತಿಲ್ಲ. ಹೀಗಾಗಿ, ಸಂಜೆಯಾದರೆ ಸಾಕು, ಆವರಿಸುವ ಕತ್ತಲೆಯಿಂದಾಗಿ ನಿವಾಸಿಗಳು ಆತಂಕದಲ್ಲಿಯೇ ಸಂಚರಿಸುತ್ತಿದ್ದಾರೆ.
ಎಲ್‍ಇಡಿ ದೀಪ ಅಳವಡಿಸುವ ಟೆಂಡರ್ ಪಡೆದಿರುವ ಬೆಂಗಳೂರಿನ ಸುಲ್ತಾನ್‍ಉಲ್ಲಾ ಖಾನ್ (ಯುನೈಟೆಡ್ ಎಂಜಿನಿಯರ್ಸ್) ಅವರಿಗೆ 2024ರ ಜುಲೈ 12ರಂದು ಕೆಲಸದ ಆದೇಶ ನೀಡಲಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ದೀಪ ಅಳವಡಿಸಿದ್ದಾರೆ.
‘ಗುತ್ತಿಗೆದಾರರಿಗೆ ಎರಡು ವರ್ಷ ಅವಧಿಗೆ ನಿರ್ವಹಣೆಯ ನಿಬಂಧನೆ ಇದೆ. ಆದರೆ, ಕಾಮಗಾರಿ ಪೂರ್ಣಗೊಂಡು ವರ್ಷವೂ ಆಗಿಲ್ಲ, ಈಗಲೇ ನಿರ್ವಹಣೆ ಇಲ್ಲ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
‘ಕಾಮಗಾರಿ ಸ್ಥಳದಲ್ಲಿ ಯೋಜನೆ ಹೆಸರು, ಕಾಮಗಾರಿ ವಿವರ, ಗುತ್ತಿಗೆದಾರರ ಹೆಸರು ಮತ್ತು ವಿಳಾಸ, ದೂರವಾಣಿ ಸಂಪರ್ಕ ಸಂಖ್ಯೆ, ನಿಗದಿಪಡಿಸಿದ ಹೆಸರು, ಕಾಮಗಾರಿ ಪ್ರಾರಂಭಿಸಿದ ಮತ್ತು ಮುಕ್ತಾಯದ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಿ ನಾಮಫಲಕ ಅಳವಡಿಸಬೇಕು ಎಂಬ ನಿಬಂಧನೆ ಇದ್ದರೂ ನಾಮಫಲಕ ಅಳವಡಿಸಿಲ್ಲ. ಅಳವಡಿಸಿದ ಎಲ್‍ಇಡಿ ದೀಪಗಳು ಒಂದೊಂದಾಗಿ ಹಾಳಾಗುತ್ತಿದ್ದರೂ ಹೊಸ ದೀಪ ಅಳವಡಿಸಲು ಗುತ್ತಿಗೆದಾರರು ಮುಂದಾಗಿಲ್ಲ’ ಎಂದು ಪುರಸಭೆಯ 21ನೇ ವಾರ್ಡ್‍ನ ಸದಸ್ಯ ಬಸವರಾಜ ಚಮಕೇರಿ ಆರೋಪಿಸಿದ್ದಾರೆ.
‘ದೀಪ ಅಳವಡಿಸಲು ಎನ್‍ಎಬಿಎಲ್/ ಸಿಪಿಆರ್‌ಐ ಮತ್ತು ಯಾವುದೇ ಸರ್ಕಾರಿ ಪ್ರಮಾಣೀಕೃತ ಸಂಸ್ಥೆ, ಐಎಸ್‍ಒ ಮಾನ್ಯತೆ ಪಡೆಯುವುದು ಕಡ್ಡಾಯವಿದ್ದರೂ ಯಾವುದೇ ಪ್ರಮಾಣ ಪತ್ರವನ್ನು ಗುತ್ತಿಗೆದಾರ ಸಲ್ಲಿಸಿಲ್ಲ. ಟೆಂಡರ್ ನಿಯಮಾವಳಿ ಗಾಳಿಗೆ ತೂರಿ ಗುತ್ತಿಗೆದಾರರಿಗೆ ಕೆಲಸದ ಆದೇಶ ನೀಡಲಾಗಿದೆ. ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಬಸವರಾಜ ಚಮಕೇರಿ ಆಗ್ರಹಿಸುತ್ತಾರೆ.
ಸಮರ್ಪಕವಾಗಿ ಎಲ್‍ಇಡಿ ದೀಪದ ನಿರ್ವಹಣೆ ಮಾಡಲು ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗುವುದು. ಆದರೂ ನಿರ್ವಹಣೆ ಕೈಗೊಳ್ಳದಿದ್ದರೆ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದುಈರಣ್ಣ ದಡ್ಡಿ ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.