ADVERTISEMENT

ಮಹಾಲಿಂಗಪುರ | ತ್ಯಾಜ್ಯ ತುಂಬಿದ ಚರಂಡಿ; ಸಾಂಕ್ರಾಮಿಕ ರೋಗ ಭೀತಿ

ಅವೈಜ್ಞಾನಿಕ ಚರಂಡಿ ನಿರ್ಮಾಣ * ಕಾಲುವೆ ಒತ್ತುವರಿ ಆರೋಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 7:34 IST
Last Updated 16 ಏಪ್ರಿಲ್ 2025, 7:34 IST
ಮಹಾಲಿಂಗಪುರದ ದಾನಮ್ಮದೇವಿ ದೇವಸ್ಥಾನದ ಬಳಿ ಚರಂಡಿ ತುಂಬಿಕೊಂಡಿರುವ ತ್ಯಾಜ್ಯ
ಮಹಾಲಿಂಗಪುರದ ದಾನಮ್ಮದೇವಿ ದೇವಸ್ಥಾನದ ಬಳಿ ಚರಂಡಿ ತುಂಬಿಕೊಂಡಿರುವ ತ್ಯಾಜ್ಯ   

ಮಹಾಲಿಂಗಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ ಬಡಾವಣೆಗಳ ಬಹುತೇಕ ಚರಂಡಿಗಳು ಕಸ, ತ್ಯಾಜ್ಯ, ಹೂಳಿನಿಂದ ತುಂಬಿ ತುಳುಕುತ್ತಿದ್ದು, ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.

ಬಡಾವಣೆಗಳ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಕಾಣದಂತೆ ಗಿಡಗಳು ಬೆಳೆದುನಿಂತಿವೆ. ಚರಂಡಿಯಲ್ಲಿ ನೀರು ನಿಂತು ದುರ್ವಾಸನೆ ಹರಡುತ್ತಿದೆ. ಕೆಲ ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದು, ಇದರಿಂದ ನೀರು ಸರಾಗವಾಗಿ ಮುಂದೆ ಸಾಗಲು ಸಾಧ್ಯವಾಗದೇ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ.

ಕೆಲ ಬಡಾವಣೆಗಳಲ್ಲಿ ಚರಂಡಿಗಳು ಪೂರ್ಣಗೊಂಡಿಲ್ಲ. ಚರಂಡಿಗಳಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯವನ್ನು ಎಸೆಯುವ ಮೂಲಕ ಅಪರೋಕ್ಷವಾಗಿ ಸೊಳ್ಳೆಕಾಟ, ಸಾಂಕ್ರಾಮಿಕ ರೋಗ, ದುರ್ವಾಸನೆ ಹರಡಲು ಸಾರ್ವಜನಿಕರೇ ಕಾರಣವಾಗುತ್ತಿದ್ದಾರೆ. ಅಲ್ಲಲ್ಲಿ ನೀರು ಹರಿಯಲು ಅಡೆತಡೆಗಳಿದ್ದರೂ ಸ್ವಚ್ಛತೆಯತ್ತ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಹರಿಸುತ್ತಿಲ್ಲ.

ADVERTISEMENT

ಬಸ್ ನಿಲ್ದಾಣದಿಂದ ರಬಕವಿ ಕಮಾನುವರೆಗೆ ನಡೆದಿರುವ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಒತ್ತುವರಿ ಆಗಿರುವ ಕಟ್ಟಡಗಳನ್ನು ತೆರವುಗೊಳಿಸಿ ನೆಲಸಮ ಮಾಡಲಾದ ಕಟ್ಟಡದ ಅವಶೇಷಗಳನ್ನು ಚರಂಡಿ ಮೇಲೆಯೇ ಬಿಡಲಾಗಿದೆ. ಅವಶೇಷಗಳು ಚರಂಡಿ ಸೇರಿದ್ದರಿಂದ ಅಲ್ಲಿನ ನೀರು ಮುಂದೆ ಸಾಗುತ್ತಿಲ್ಲ. ಇದರಿಂದ ದುರ್ವಾಸನೆ ಹರಡಿ ಇದಕ್ಕೆ ಅಂಟಿಕೊಂಡಿರುವ ನಿವಾಸಿಗಳು ಬೇಸತ್ತು ಹೋಗಿದ್ದಾರೆ.

'ಡಬಲ್ ರಸ್ತೆಯಲ್ಲಿ ದೊಡ್ಡ ಚರಂಡಿ ಇದ್ದರೂ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯುತ್ತಿಲ್ಲ. ಪ್ರತಿ ವರ್ಷ ಹೂಳು ತೆಗೆಯುತ್ತಿದ್ದರೂ ಅಷ್ಟಕಷ್ಟೆ ಎಂಬಂತಾಗಿದೆ. ಬಸವೇಶ್ವರ ವೃತ್ತದಲ್ಲಿನ ದೊಡ್ಡ ಚರಂಡಿಯಲ್ಲಿ ಹೂಳು ತುಂಬಿಕೊಂಡು ಚಿಕ್ಕ ಮಳೆಯಾದರೆ ಸಾಕು ಚರಂಡಿ ನೀರು ರಸ್ತೆ ಆವರಿಸುತ್ತದೆ. ಡಚ್ ಕಾಲೋನಿ, ಕೆಂಗೇರಿಮಡ್ಡಿ ಸೇರಿ ಹಲವು ಬಡಾವಣೆಗಳ ನೀರು ತಗ್ಗು ಪ್ರದೇಶದಲ್ಲಿರುವ ಜಯನಗರ ಬಡಾವಣೆ ಚರಂಡಿ ಸೇರುತ್ತದೆ. ಈ ನೀರನ್ನು ಹೊರಹಾಕಲು ರಾಜಕಾಲುವೆ ನಿರ್ಮಿಸಿದ್ದರೂ ಅದು ಒತ್ತುವರಿಯಿಂದಾಗಿ ನೀರು ಸರಾಗವಾಗಿ ಹೋಗುತ್ತಿಲ್ಲ' ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

'ಮಳೆಗಾಲದಲ್ಲಿ ಹೂಳು ಎತ್ತಿದರೆ ಅದೇ ಮಳೆ ನೀರಿನಲ್ಲಿ ಆ ಹೂಳು ಮತ್ತೆ ಚರಂಡಿಯನ್ನು ಸೇರುತ್ತದೆ. ಹೀಗಾಗಿ ಮಳೆಗಾಲ ಪೂರ್ವದಲ್ಲಿ ಚರಂಡಿ, ಕಾಲುವೆಗಳ ಹೂಳು ತೆಗೆಯಬೇಕು. ಆದರೆ, ಪಟ್ಟಣದಲ್ಲಿ ಚರಂಡಿಗಳನ್ನು ಸನ್ನದ್ಧ ಸ್ಥಿತಿಯಲ್ಲಿಡುವ ಕೆಲಸಗಳು ನಡೆಯುತ್ತಿಲ್ಲ. ಪುರಸಭೆ ಅಧಿಕಾರಿಗಳು ಗಮನಹರಿಸಬೇಕು' ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ತೆರವು ಕಾರ್ಯಾಚರಣೆಯ ಕಟ್ಟಡದ ಅವಶೇಷಗಳು ಚರಂಡಿ ಮೇಲೆ ಬಿದ್ದಿದ್ದರಿಂದ ನೀರು ನಿಂತಿರುವುದು
ಚರಂಡಿ ಕಾಲುವೆಗಳ ಹೂಳನ್ನು ಮುಂದಿನ ತಿಂಗಳು ತೆಗೆಯಲಾಗುವುದು. ಚರಂಡಿ ಸೇರಿದ ಕಟ್ಟಡದ ಅವಶೇಷಗಳನ್ನು ಶೀಘ್ರ ತೆರವು ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು.
- ಈರಣ್ಣ ದಡ್ಡಿ ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.