
ಮಹಾಲಿಂಗಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿಯ ಕೌಜಲಗಿ ನಿಂಗಮ್ಮ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲು ಬಾಡಿಗೆ ದರ ಪರಿಷ್ಕರಣೆ ಮಾಡಿದ್ದರೂ ಕಾರ್ಯಕ್ರಮಗಳನ್ನು ನಡೆಸಲು ಯಾರೂ ಮುಂದೆ ಬರುತ್ತಿಲ್ಲ.
ಸ್ಥಳೀಯ ಪುರಸಭೆಯು ರಂಗಮಂದಿರದ ನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಕಲೆ, ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮ (ಟಿಕೆಟ್ ರಹಿತ ಹಾಗೂ ಟಿಕೆಟ್ ಸಹಿತ), ಸಂಘ ಸಂಸ್ಥೆ, ವಾಣಿಜ್ಯ ಕಾರ್ಯಕ್ರಮ, ಶಾಲೆ– ಕಾಲೇಜು ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮಗಳ ಆಯೋಜನೆಗೆ ಪ್ರತ್ಯೇಕವಾಗಿ ಬಾಡಿಗೆ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ನಿರಾಸಕ್ತಿ ತೋರಿದ ಕಾರಣ ಪುರಸಭೆಯು ಕಳೆದ ಅಕ್ಟೋಬರ್‌ನಿಂದ ದರ ಪರಿಷ್ಕರಣೆ ಮಾಡಿದೆ. ಆದರೂ, ಈ ದರ ಪಾವತಿಸಿ ಕಾರ್ಯಕ್ರಮ ನಡೆಸಲು ಯಾರೂ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ರಂಗಮಂದಿರ ಕಟ್ಟಡ ಪಾಳು ಬಿದ್ದಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಿಟಕಿ ಗಾಜು, ಶೌಚಾಲಯ ಪೈಪ್‍ಗಳು ಒಡೆದಿವೆ. ನಾಮಫಲಕ ಕಿತ್ತುಹೋಗಿದೆ.
ರಂಗಮಂದಿರ ₹ 3.20 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, 2022ರ ಮಾರ್ಚ್ 12 ರಂದು ಉದ್ಘಾಟನೆಗೊಂಡಿದೆ. ಆದರೆ, ಉದ್ಘಾಟನೆಗೊಂಡ ನಂತರ ನಡೆದಿರುವುದು ಕೆಲವೇ ಕೆಲವು ಕಾರ್ಯಕ್ರಮಗಳು ಮಾತ್ರ. ಈಚಿನ ವರ್ಷಗಳಲ್ಲಿ ಯಾವ ಕಾರ್ಯಕ್ರಮಗಳೂ ನಡೆದಿಲ್ಲ. ರಂಗಮಂದಿರದ ಪಕ್ಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆಲ ಕಾರ್ಯಕ್ರಮಗಳನ್ನು ಇಲ್ಲೇ ನಡೆಸಲಾಗುತ್ತದೆ.
2014ರಲ್ಲಿ ₹ 1.15 ಕೋಟಿ ವೆಚ್ಚದಲ್ಲಿ ಭೂಸೇನಾ ನಿಗಮದಿಂದ ಆರಂಭಗೊಂಡ ರಂಗಮಂದಿರದ ಕಾಮಗಾರಿ ಹಲವು ಸಮಸ್ಯೆಗಳಿಂದಾಗಿ ವಿಳಂಬಗೊಂಡಿತು. 2017ರಲ್ಲಿ ಕಟ್ಟಡ ನಿರ್ಮಾಣ ಮುಗಿಯಿತು. ನಂತರ ಲೋಕೋಪಯೋಗಿ ಇಲಾಖೆಯಿಂದ ₹ 2.05 ಕೋಟಿ ವೆಚ್ಚದಲ್ಲಿ 2017 ರಲ್ಲಿ ಆರಂಭಗೊಂಡ ಬಾಕಿ ಉಳಿದ ಕಾಮಗಾರಿ 2022ರಲ್ಲಿ ಪೂರ್ಣಗೊಂಡಿದೆ. ಕಟ್ಟಡ ಪೂರ್ಣಗೊಂಡ ನಂತರ ಲೋಕೋಪಯೋಗಿ ಇಲಾಖೆಯು 2022ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಿದೆ. ಇದರ ನಿರ್ವಹಣೆಯನ್ನು 2024ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ಥಳೀಯ ಪುರಸಭೆಗೆ ಹಸ್ತಾಂತರಿಸಿದೆ.
‘ರಂಗಮಂದಿರದಲ್ಲಿ ಪ್ರೇಕ್ಷಕರ ಆಸನಗಳ ಕೊರತೆ, ವೇದಿಕೆ ಕಾರ್ಯಕ್ರಮ ನಡೆಸಲು ಅಗತ್ಯ ಸಾಮಗ್ರಿಗಳ ಹಾಗೂ ಸೌಲಭ್ಯಗಳ ಕೊರತೆಯಿಂದಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಇಲ್ಲಿ ಕಾರ್ಯಕ್ರಮ ಆಯೋಜನೆಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್. ಗೊಂಬಿ ತಿಳಿಸಿದರು.
ಒಂದೆಡೆ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯದಿದ್ದರೂ, ಇನ್ನೊಂದೆಡೆ ವಿದ್ಯುತ್ ಬಿಲ್ ಬಾಕಿ ಬೆಳೆಯುತ್ತಲೇ ಇದೆ. ಪ್ರತಿ ತಿಂಗಳು ಕನಿಷ್ಠ ದರ ಬರುತ್ತಿದೆ. ಹೆಸ್ಕಾಂ ನೀಡಿದ ಮಾಹಿತಿ ಪ್ರಕಾರ, 2025ರ ಜನವರಿಯವರೆಗೆ ₹ 1.31 ಲಕ್ಷ ಬಿಲ್ ಬಾಕಿ ಇದೆ.
ಕೌಜಲಗಿ ನಿಂಗಮ್ಮ ರಂಗಮಂದಿರಕ್ಕೆ ಡಿಸೆಂಬರ್ ಅಂತ್ಯದೊಳಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ರಂಗಮಂದಿರದ ನ್ಯೂನತೆಗಳ ಪಟ್ಟಿ ಮಾಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ.ಸಂತೋಷ ಭೋವಿ ಪ್ರಭಾರ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.