ADVERTISEMENT

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ: ಮೊಳಗಿದ ‘ಮಹೇಶ್ ಅಮರ ರಹೇ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 14:05 IST
Last Updated 26 ಡಿಸೆಂಬರ್ 2024, 14:05 IST
ಮಹಾಲಿಂಗಪುರದ ಪ್ರಮುಖ ಬೀದಿಗಳಲ್ಲಿ ಯೋಧ ಮಹೇಶ ನಾಗಪ್ಪ ಮರಿಗೊಂಡ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು
ಮಹಾಲಿಂಗಪುರದ ಪ್ರಮುಖ ಬೀದಿಗಳಲ್ಲಿ ಯೋಧ ಮಹೇಶ ನಾಗಪ್ಪ ಮರಿಗೊಂಡ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು   

ಮಹಾಲಿಂಗಪುರ: ಜಮ್ಮು ಮತ್ತು ಕಾಶ್ಮೀರದ ಪೂಂಛ ಜಿಲ್ಲೆಯಲ್ಲಿ ಸೇನಾ ವಾಹನವು ಕಂದಕಕ್ಕೆ ಉರುಳಿ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ಮಹೇಶ ನಾಗಪ್ಪ ಮರಿಗೊಂಡ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ಕೆಂಗೇರಿಮಡ್ಡಿಯ ಸರ್ಕಾರಿ ಜಾಗದಲ್ಲಿ ಗುರುವಾರ ನೆರವೇರಿಸಲಾಯಿತು.

ಬೆಳಗಾವಿ ಮೂಲಕ ಮಧ್ಯಾಹ್ನ 12.40 ಗಂಟೆಗೆ ಪಟ್ಟಣಕ್ಕೆ ಆಗಮಿಸಿದ ಯೋಧನ ಪಾರ್ಥಿವ ಶರೀರವನ್ನು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕುಟುಂಬ ಸದಸ್ಯರು, ಶಾಲಾ ಮಕ್ಕಳು, ಅಭಿಮಾನಿಗಳು, ಮುಖಂಡರು, ಅಧಿಕಾರಿಗಳು, ಮಾಜಿ ಸೈನಿಕ ಸಂಘಟನೆಯವರು ಅಂತಿಮ ದರ್ಶನ ಪಡೆದರು.

ಮೃತರ ಗೌರವಾರ್ಥ ಕ್ರೀಡಾಂಗಣ ಆವರಣದ ಸರ್ಕಾರಿ ಶಾಲೆ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಪಾರ್ಥಿವ ಶರೀರ ಕ್ರೀಡಾಂಗಣಕ್ಕೆ ತರುತ್ತಿದ್ದಂತೆ ಯೋಧನ ಪತ್ನಿ ಲಕ್ಷ್ಮಿ, ತಾಯಿ ಶಾರದಾ, ತಮ್ಮ ಸಂತೋಷ, ತಂಗಿ ವಿದ್ಯಾಶ್ರೀ ಅವರ ಆಕ್ರಂದನ ಮುಗಿಲುಮುಟ್ಟಿತ್ತು.

ADVERTISEMENT

ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಕೆಂಗೇರಿಮಡ್ಡಿವರೆಗೆ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ‘ಮಹೇಶ್ ಅಮರ ರಹೇ, ಬೋಲೋ ಭಾರತ ಮಾತಾಕಿ ಜೈ’ ಘೋಷಣೆಗಳು ಮೊಳಗಿದವು. ಕೆಂಗೇರಿಮಡ್ಡಿಯ ಸರ್ಕಾರಿ ಜಾಗದಲ್ಲಿ ಸೇನಾ ಪಡೆ ಸಿಬ್ಬಂದಿ ಮೂರು ಬಾರಿ ಕುಶಾಲ ತೋಪು ಸಿಡಿಸಿದರು. ನಂತರ ಹಿಂಧೂ ಧರ್ಮದ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯ ಜನರು ಭಾರತದ ಧ್ವಜ ಹಿಡಿದು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ಗಿರೀಶ ಸ್ವಾದಿ, ಸಿಪಿಐ ಸಂಜೀವ ಬಳೆಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪುರಸಭೆ ಸದಸ್ಯರು ಇದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯೋಧ ಮಹೇಶ ಮರಿಗೊಂಡ ಅವರ ಅಂತಿಮ ದರ್ಶನ ಪಡೆಯುವ ವೇಳೆ ಪತ್ನಿ ಲಕ್ಷ್ಮಿ ಆಕ್ರಂದನ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯೋಧ ಮಹೇಶ ಮರಿಗೊಂಡ ಅವರ ಪತ್ನಿ ಲಕ್ಷ್ಮಿ ಅವರಿಗೆ ಜನರು ಸಾಂತ್ವನ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.