
ಮಹಾಲಿಂಗಪುರ: ಕಳೆದ ಒಂದು ವಾರದಿಂದ ತರಕಾರಿಗಳ ದರ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಪಟ್ಟಣದ ಬನಶಂಕರಿ ದೇವಸ್ಥಾನದ ಎದುರು ಹಾಗೂ ಶುಕ್ರವಾರ ಬಸವನಗರ, ಶನಿವಾರ ಶಾಂತಿನಿಕೇತನ ಕಾಲೊನಿಯಲ್ಲಿ ತರಕಾರಿ ಸಂತೆ ನಡೆಯುತ್ತಿದೆ. ಮಂಗಳವಾರ ನಡೆಯುವ ಸಂತೆಗೆ ಸುತ್ತಲಿನ ಹತ್ತಾರು ಗ್ರಾಮಗಳ ಜನರು ಬರುತ್ತಾರೆ.
ಬರಗಾಲದಿಂದ ನೀರಿಲ್ಲದೆ ಬೆಳೆ ಒಣಗಿದ ಕಾರಣ ತರಕಾರಿಗಳ ದರ ಏರಿಕೆಯಾಗಿದೆ. ಇಳುವರಿ ಕುಸಿತಗೊಂಡ ಕಾರಣ ಮಾರುಕಟ್ಟೆಗೆ ತರಕಾರಿ ಪೂರೈಕೆ ಅತ್ಯಂತ ಕಡಿಮೆಯಾಗಿದೆ. ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ದರ ಏರಿಕೆಯ ಲಾಭ ರೈತನಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಟೊಮೆಟೊ ಕೆ.ಜಿ.ಗೆ ₹40, ಹೀರೆಕಾಯಿ ₹80, ಹಸಿಮೆಣಸಿನಕಾಯಿ ₹80, ಸೌತೆಕಾಯಿ ₹40, ಈರುಳ್ಳಿ ₹25, ಬದನೆಕಾಯಿ ₹40, ಬೆಂಡೆಕಾಯಿ ₹60, ಚವಳಿಕಾಯಿ ₹60, ಆಲೂಗಡ್ಡೆ ₹40, ಬೀಟ್‌ರೂಟ್ ₹80ಕ್ಕೆ ಮಾರಾಟವಾಗಿತ್ತಿದೆ. ಬೀನ್ಸ್ ಹಾಗೂ ಕ್ಯಾರೆಟ್ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ₹10ಕ್ಕೆ ಮೂರು ನುಗ್ಗೆಕಾಯಿ, ಮೂರು ನಿಂಬೆಹಣ್ಣು ಸಿಗುತ್ತಿದೆ.
ಬೆಳ್ಳುಳ್ಳಿ ಕೆ.ಜಿ.ಗೆ ₹240, ಶುಂಠಿಗೆ ₹200 ಇದ್ದು, ಮೆಂತೆ ಸೊಪ್ಪು ಸಣ್ಣ ಕಟ್ಟಿಗೆ ₹30, ಕೊತ್ತಂಬರಿ ಕಟ್ಟಿಗೆ ₹10, ಎಲೆಕೋಸು ₹20ಕ್ಕೆ ಬಿಕರಿಯಾಗುತ್ತಿದೆ.
‘ತರಕಾರಿಗಳು ಸಮರ್ಪಕವಾಗಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ದರ ಕೊಂಚ ಏರಿಕೆಯಾಗಿದೆ. ಚೌಕಾಶಿ ಮಾಡಿ ಕಡಿಮೆ ದರ ಇರುವ ತರಕಾರಿಯನ್ನೇ ಗ್ರಾಹಕರು ಖರೀದಿಸುತ್ತಿದ್ದಾರೆ. ಹೆಚ್ಚು ದೆ ಇರುವ ತರಕಾರಿಯನ್ನು ಕಡಿಮೆ ಪ್ರಮಾಣ ಖರೀದಿ ಮಾಡುತ್ತಿದ್ದಾರೆ’ ಎಂದು ತರಕಾರಿ ವ್ಯಾಪಾರಿ ಬುರಾನಾ ಬಾಗವಾನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.