ಬಾದಾಮಿ: ‘ಮಲಪ್ರಭಾ ನದಿ ದಂಡೆಯ 30ಕ್ಕೂ ಅಧಿಕ ಗ್ರಾಮಗಳ ಪುನರ್ವಸತಿ ಆಸರೆ ಕೇಂದ್ರಗಳಲ್ಲಿ ಜನರಿಗೆ ಮೂಲ ಸೌಲಭ್ಯಗಳ ಸಮಸ್ಯೆಗಳಿವೆ. ಹಂತ ಹಂತವಾಗಿ ಅವುಗಳನ್ನು ನಿವಾರಿಸುತ್ತೇನೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಆಶ್ರಯದಲ್ಲಿ ನಂದಿಕೇಶ್ವರ ಗ್ರಾಮದಲ್ಲಿ ಶುಕ್ರವಾರ ಎರಡು ಸಮುದಾಯ ಭವನ, ಮೂರು ಸಿಸಿ ರಸ್ತೆ, ಪುನರ್ವಸತಿ ಕೇಂದ್ರದಲ್ಲಿ ಸಿಸಿ ರಸ್ತೆ ಮತ್ತು ಪ್ರಾಥಮಿಕ ಶಾಲೆಯ ದುರಸ್ತಿಗೆ ಒಟ್ಟು ₹1.60 ಕೋಟಿ ಮೌಲ್ಯದ ಕಾಮಗಾರಿಗೆ ಅವರು ಭೂಮಿ ಪೂಜೆ ಕೈಗೊಂಡರು.
‘ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು’ ಎಂದು ಹೇಳಿದರು.
ಬಿ.ಎನ್. ಜಾಲಿಹಾಳ ಗ್ರಾಮದಲ್ಲಿ ಸಮುದಾಯ ಭವನ, ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣ, ಶಾಲಾ ಕೊಠಡಿ ದುರಸ್ತಿ ಮತ್ತು ಹುಲಿಗೆಮ್ಮನಕೊಳ್ಳ ರಸ್ತೆ ಕಾಮಗಾರಿಗೆ ಅಂದಾಜು ₹54.50 ಲಕ್ಷ ಮೌಲ್ಯದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಹೊಸೂರ ಗ್ರಾಮದಲ್ಲಿ ಮೂರು ಸಮುದಾಯ ಭವನ, ಎರಡು ಸಿಸಿ ರಸ್ತೆ, ಗುಡ್ಡದಮಲ್ಲಾಪೂರ ಗ್ರಾಮದಿಂದ ಹೊಸೂರ ಗ್ರಾಮದ ಹೊಲದ ವರೆಗೆ ರಸ್ತೆ ನಿರ್ಮಾಣಕ್ಕೆ ₹60 ಲಕ್ಷ ಮೌಲ್ಯದ ಕಾಮಗಾರಿ ಮತ್ತು ಅನಂತಗಿರಿ ಗ್ರಾಮದಲ್ಲಿ ಒಂದು ಶಾಲಾ ಕೊಠಡಿ ಮತ್ತು ಸಿಸಿ ರಸ್ತೆಗೆ ₹29.50 ಲಕ್ಷ ಕಾಮಗಾರಿಗೆ ಚಾಲನೆ ನೀಡಿದರು.
ಮಂಜುನಾಥ ಪೂಜಾರ, ಮುತ್ತಪ್ಪ ತಳವಾರ, ಈರಣ್ಣ ಹಿರೇಗೌಡರ, ಚನ್ನಯ್ಯ ಹಿರೇಮಠ, ರುದ್ರಗೌಡ ನ್ಯಾಮನಗೌಡ್ರ, ಬಸವರಾಜ ತಳವಾರ, ಲಕ್ಷ್ಮಣ ಕೂಚಲ, ಮಹಾಗುಂಡಪ್ಪ ಕೆರಿಹೊಲದ, ಈರಣ್ಣ ಡೊಳ್ಳಿನ, ನಿಂಗನಗೌಡ ಜನಾಲಿ, ಬಸವರಾಜ ಪಾತ್ರೋಟಿ, ಅಧಿಕಾರಿಗಳಾದ ಹೇಮಲತಾ ಸಿಂಧೆ, ಬಸವರಾಜ ಚಿಟಗುಬ್ಬಿ, ಶ್ರೀಕಾಂತ ಕೆಲೂಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.