ADVERTISEMENT

ಬಾಗಲಕೋಟೆ | ಮದುವೆ ಹೆಸರಿನಲ್ಲಿ ವಂಚನೆ: ನೈಜೇರಿಯಾ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 4:17 IST
Last Updated 5 ಸೆಪ್ಟೆಂಬರ್ 2025, 4:17 IST
ಅಲಿವರ್ ವುಗುವೋ ಒಕಿಚಿಕುವು
ಅಲಿವರ್ ವುಗುವೋ ಒಕಿಚಿಕುವು   

ಬಾಗಲಕೋಟೆ: ಎರಡನೇ ಮದುವೆಗಾಗಿ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿ ಮಹಿಳೆಯೊಬ್ಬರು ಹಾಕಿದ್ದ ಮಾಹಿತಿ ನೋಡಿ, ಅವರನ್ನು ಮದುವೆಯಾಗುವುದಾಗಿ ಸುಳ್ಳು ಹೇಳಿದ್ದಲ್ಲದೇ, ಮಹಿಳೆಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದ ನೈಜೇರಿಯಾ ಮೂಲದ ವ್ಯಕ್ತಿ ಬಂಧಿಸುವಲ್ಲಿ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿ ಅಲಿವರ್ ವುಗುವೋ ಒಕಿಚಿಕುವು ಎಂದು ಗುರುತಿಸಲಾಗಿದೆ. ಮುಂಬೈನಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಪ್ರಕರಣದ ವಿವರ: ಜಿಲ್ಲೆಯ ಇಳಕಲ್ ನಗರದ ಮಹಿಳೆಯೊಬ್ಬರಿಗೆ ವಿಚ್ಛೇದನ ಆಗಿತ್ತು. ಎರಡನೇ ಮದುವೆ ಮಾಡಿಕೊಳ್ಳಲು ಮಹಿಳಾ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿ ತಮ್ಮ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವೆಬ್‌ಸೈಟ್ ಮೂಲಕವೇ ಪರಿಚಯವಾಗಿದ್ದ ನೈಜೇರಿಯಾದ ಆರೋಪಿ, ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದನು.

ADVERTISEMENT

ತನ್ನ ಹೆಸರು ಸತ್ಯ ಅಮಿತ್ ಎಂದೂ, ತಾನು ಲಂಡನ್ ನಿವಾಸಿ ಎಂದು ಹೇಳಿದ್ದ. ಮದುವೆಯಾಗುವುದಾಗಿಯೂ ತಿಳಿಸಿದ್ದ. ಅದನ್ನು ಮಹಿಳೆ ಸಹ ನಂಬಿದ್ದರು. ಲಂಡನ್‍ನಿಂದ ₹1 ಕೋಟಿ ಯುಎಸ್ ಡಾಲರ್ ತಂದಿದ್ದು, ದೆಹಲಿ ಕಸ್ಟಮ್ಸ್ ಕಚೇರಿಯಲ್ಲಿ ಹಣ ಸೀಜ್ ಮಾಡಲಾಗಿದೆ. ಅದನ್ನು ಬಿಡಿಸಿಕೊಳ್ಳಲು ಇಂಡಿಯನ್ ಕರೆನ್ಸಿ ಬೇಕಾಗಿದೆ ಎಂದು ತನ್ನ ವಿವಿಧ ಖಾತೆಗಳಿಗೆ ₹5.55 ಲಕ್ಷ ಹಾಕಿಸಿಕೊಂಡು ವಂಚಿಸಿದ್ದ.

ಈ ಬಗ್ಗೆ ಕಳೆದ ವರ್ಷ ಇಳಕಲ್‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಬಾಗಲಕೋಟೆ ಸಿಇಎನ್ ಠಾಣೆಗೆ ಪ್ರಕರಣ ವರ್ಗಾವಣೆ ಆಗಿತ್ತು. ಆರೋಪಿಯ ಡಿಜಿಟಲ್ ಸಾಕ್ಷ್ಯಗಳು ಹಾಗೂ ಇತರೆ ಮಾಹಿತಿ ಕಲೆಹಾಕಿದ್ದ ಸಿಇಎನ್ ಠಾಣೆ ಪೊಲೀಸರು, ಆರೋಪಿ ಬಂಧಿಸಿದ್ದಾರೆ.

ಆರೋಪಿಯಿಂದ ನಾಲ್ಕು ಮೊಬೈಲ್, ಒಂದು ಲ್ಯಾಪ್‍ಟಾಪ್, ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಇಂತಹದೇ ವಂಚನೆ ಮಾಡಿದ್ದಾನೆಯೇ ಎಂದು ತನಿಖೆ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.