ADVERTISEMENT

ವೈದ್ಯರಿಗೂ ಕಾನೂನಿನ ಜ್ಞಾನ ಇರಲಿ: ನ್ಯಾಯಮೂರ್ತಿ ರವಿ ಹೊಸಮನಿ

ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 33ನೇ ಕರ್ನಾಟಕ ವೈದ್ಯಕೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:31 IST
Last Updated 8 ನವೆಂಬರ್ 2025, 4:31 IST
ಬೀಳಗಿ ತಾಲ್ಲೂಕಿನ ಬಾಡಗಂಡಿ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ 33ನೇ ಕರ್ನಾಟಕ ವೈದ್ಯಕೀಯ ಸಮ್ಮೇಳನದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಅವರನ್ನು ಸನ್ಮಾನಿಸಲಾಯಿತು
ಬೀಳಗಿ ತಾಲ್ಲೂಕಿನ ಬಾಡಗಂಡಿ ಎಸ್.ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ 33ನೇ ಕರ್ನಾಟಕ ವೈದ್ಯಕೀಯ ಸಮ್ಮೇಳನದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಅವರನ್ನು ಸನ್ಮಾನಿಸಲಾಯಿತು   

ಬೀಳಗಿ: ವೈದ್ಯರಿಗೆ ಕಾನೂನು ಜ್ಞಾನವನ್ನು ನೀಡುವುದು ಮತ್ತು ಅವರ ಮೇಲೆ ದಾಖಲಾಗುವ ಮೊಕದ್ದಮೆ ಭಯವನ್ನು ನಿವಾರಿಸುವುದು ವೈದ್ಯಕೀಯ ಕಾನೂನು, ನೀತಿ ಮತ್ತು ತತ್ವಗಳ ಕುರಿತು ಚರ್ಚಿಸುವುದು ವೈದ್ಯಕೀಯ ಕಾನೂನು ಸಮ್ಮೇಳನದ ಮೂಲ ಉದ್ದೇಶವಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದರು.

ತಾಲ್ಲೂಕಿನ ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ 33ನೇ ಕರ್ನಾಟಕ ವೈದ್ಯಕೀಯ ಕಾನೂನು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವೈದ್ಯಕೀಯ ಕಾನೂನು ಸೇವೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಿ ಸಂಶೋಧನೆ ಮತ್ತು ಬೋಧನೆಯನ್ನು ಉತ್ತೇಜಿಸಲು, ಕೈಗಾರಿಕಾ ಆರೋಗ್ಯ ರಕ್ಷಣೆಯಲ್ಲಿ ಕಾನೂನು ಅನುಸರಣೆ, ಸಮ್ಮತಿ ಮತ್ತು ಗೌಪ್ಯತೆಯ ಸವಾಲುಗಳನ್ನು ಪರಿಹರಿಸುವುದು ಮತ್ತು ಕೆಲಸದ ಸ್ಥಳದ ಘಟನೆಗಳನ್ನು ಪರಿಣಾಮಕಾರಿಯಾಗಿ ವರದಿ ಮಾಡುವುದು ಸಮ್ಮೇಳನದ ಪ್ರಮುಖ ಉದ್ದೇಶ ಎಂದು ತಿಳಿಸಿದರು.

ADVERTISEMENT

ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಎರಡು ದಿನಗಳ ಸಮ್ಮೇಳನದಲ್ಲಿ ಮೆಡಿಕಲ್ ಡಾಕ್ಯುಮೆಂಟೇಶನ್, ವೃತ್ತಿ ಬದ್ಧತೆ, ಕಾನೂನು ತೊಡಕುಗಳು ಎದುರಾದಾಗ ಅವುಗಳನ್ನು ಎದುರಿಸುವ ಬಗೆ, ಕಾಯ್ದೆ ಮತ್ತು ಕಾನೂನುಗಳ ತಿಳುವಳಿಕೆ ಸೇರಿದಂತೆ ವಿವಿಧ ವಿಷಯಗಳು ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಈ ಸಮ್ಮೇಳನ ಪೂರಕವಾಗಲಿ ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಅವರು ಭಾಗವಹಿಸಿ ವೈದ್ಯಕೀಯ ಕಾನೂನುಗಳ ಮಾಹಿತಿ ಒದಗಿಸಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮೆಡಿಕೊ ಲಿಗಲ್ ಸೊಸೈಟಿಯ ಅಧ್ಯಕ್ಷ ಧರ್ಮರಾಯ ಇಂಗಳೆ ಅವರು ರಚಿಸಿದ 'ವಿಧಿ ವೈದ್ಯಕೀಯ ಶಾಸ್ತ್ರ ಮತ್ತು ವಿಷ ಶಾಸ್ತ್ರದ' ಗ್ರಂಥವನ್ನು ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಅವರು ಲೋಕಾರ್ಪಣೆ ಗೊಳಿಸಿದರು.

ಸಮಾರಂಭದಲ್ಲಿ ಮೆಡಿಕೊ ಲೀಗಲ್ ಸೊಸೈಟಿಯ ವತಿಯಿಂದ ಕೊಡ ಮಾಡುವ ಎಂಬಿಬಿಎಸ್, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಬಂಗಾರ ಪದಕ, ಬೆಳ್ಳಿ ಪದಕ ಹಾಗೂ ಕಂಚಿನ ಪದಕ ವಿತರಣೆ ಮಾಡಲಾಯಿತು, ರಾಜ್ಯದ ವಿವಿಧ ಜಿಲ್ಲೆಯ ವೈದ್ಯಕೀಯ ಕಾಲೇಜುಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ಮೆಡಿಕೊ ಲೀಗಲ್ ಸೊಸೈಟಿಯ ಕಾರ್ಯದರ್ಶಿ ಸೋಮಶೇಖರ ಪೂಜಾರ, ಟ್ರೇಜರ್ ಎಮ್.ಎ.ಬಗಲಿ, ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗೌರ್ನಿಂಗ್ ಕೌನ್ಸಿಲ್ ಉಪಾಧ್ಯಕ್ಷೆ ಅನುಷಾ ನಾಡಗೌಡ,ವೈದ್ಯಕೀಯ ಅಧಿಕ್ಷಕ ವಿಜಯಕುಮಾರ ಹಳ್ಳಿ, ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ, ವೈದ್ಯರು, ವೈದ್ಯ ವಿದ್ಯಾರ್ಥಿಗಳು, ತನಿಖಾಧಿಕಾರಿಗಳು, ವಕೀಲರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.