
ಬಾಗಲಕೋಟೆ: ಶಾಸಕರಾಗಿದ್ದ ಎಚ್.ವೈ. ಮೇಟಿ ಕುಟುಂಬದ ಸದಸ್ಯರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ನೀಡುತ್ತಿರುವ ಹೇಳಿಕೆಗಳು ಪಕ್ಷದ ಶಿಸ್ತು, ಒಗ್ಗಟ್ಟಿಗೆ ಧಕ್ಕೆ ತರುತ್ತಿವೆ. ಕಾರ್ಯಕರ್ತರು ನೊಂದುಕೊಳ್ಳುತ್ತಿದ್ದಾರೆ. ಹೇಳಿಕೆ ಮುಂದುವರೆಸಿದರೆ ಪಕ್ಷದ ಚೌಕಟ್ಟಿನಲ್ಲಿ ಕ್ರಮತೆಗೆದುಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೇಟಿ ಮಕ್ಕಳು ತಮ್ಮ ಬೆಂಬಲಿಗರಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕದಂತೆ ತಿಳಿಸಬೇಕು. ಇದಾದ ನಂತರವೂ ಅವರ ಬೆಂಬಲಿಗರಿಂದ ಹೇಳಿಕೆಗಳು ಬಂದರೆ, ಅವರಿಗೆ ನೋಟಿಸ್ ನೀಡಬೇಕಾಗುತ್ತದೆ ಎಂದಿದ್ದಾರೆ.
ಮೇಟಿ ಅವರ ಮಕ್ಕಳು ಉಪಚುನಾವಣೆಯಲ್ಲಿ ಆಕಾಂಕ್ಷಿಗಳಾಗಿದ್ದರೆ ಅರ್ಜಿ ಸಲ್ಲಿಸಿ. ನಿಮ್ಮ ಅಭಿಮಾನಿಗಳ ಅತಿಯಾದ ಹೇಳಿಕೆಗಳು, ಒಬ್ಬೊಬ್ಬರ ಒಂದೊಂದು ಹೇಳಿಕೆಯಿಂದ ನಿಮ್ಮ ನಡುವೆ ಒಗ್ಗಟ್ಟಿಲ್ಲ ಎನ್ನುವುದು ಸಾಬೀತಾಗುತ್ತಿದೆ. ಮೇಟಿ ಅವರು ಅಜಾತಶತ್ರು ಆಗಿದ್ದರು. ಹೀಗೆ ಹೇಳಿಕೆ ನೀಡುವುದರಿಂದ ಅನುಕಂಪ ಕಡಿಮೆಯಾಗುತ್ತದೆ ಎಂದಿದ್ದಾರೆ.
ಮೇಟಿ ಅವರ ಪುತ್ರಿ ಮಹಾದೇವಿ ಮೇಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಗುಳೇದಗುಡ್ಡದ ದುಷ್ಟ ವ್ಯಕ್ತಿ ಎಂದು ಹಾಕುತ್ತಿದ್ದಾರೆ. ಅವರು ಯಾರು? ಗುಳೇದಗುಡ್ಡದ ಜನರೇ ಮೇಟಿ ಅವರನ್ನು ಮೂರು ಬಾರಿ ಶಾಸಕರು, ಸಚಿವರನ್ನಾಗಿ ಮಾಡಿದ್ದಾರೆ. ಗುಳೇದಗುಡ್ಡ ಎನ್ನುವುದು ಅಲ್ಲಿನ ಜನರಿಗೆ ಅಪಮಾನವಾಗುತ್ತಿದೆ. ಅವರ ಹೆಸರು ಹೇಳಿ. ಹೆಸರು ಹೇಳದಿದ್ದರೆ, ಅವರೊಂದಿಗೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಮೇಟಿ ಮಕ್ಕಳ ಬೆಂಬಲಿಗರು ವಾಹನ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಳ್ಳಲಿ ಎಂದಿದ್ದಾರೆ.
ಮೇಟಿ ಅವರ ಮಕ್ಕಳನ್ನು ಅಣ್ಣನ ಮಕ್ಕಳು ಎಂದುಕೊಂಡಿದ್ದೇನೆ. ಮೇಟಿ ಅವರು 2023ರ ಚುನಾವಣೆಯಲ್ಲಿ ಗೆದ್ದು, ತೀರಿಹೋಗಿದ್ದಾರೆ. ಅವರು ಸೋತಿದ್ದರೆ, ಯಾರೂ ಬೇಕಾದರೂ ಆಕಾಂಕ್ಷಿಯಾಗಬಹುದಿತ್ತು. ಅವರು ಗೆದ್ದಿದ್ದರಿಂದ ಅವರ ಕುಟುಂಬಕ್ಕೆ ಟಿಕೆಟ್ ಹೋಗಬೇಕು ಎಂದು ಹೇಳಿದ್ದೇನೆ. ಇದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.