ADVERTISEMENT

ಬಾಗಲಕೋಟೆ | ರಫ್ತು ಮಾಹಿತಿ ಕೇಂದ್ರ ತೆರೆಯಿರಿ: ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 8:13 IST
Last Updated 23 ಡಿಸೆಂಬರ್ 2025, 8:13 IST
ಬಾಗಲಕೋಟೆ ಎಪಿಎಂಸಿಯಲ್ಲಿ ಸೋಮವಾರ ತೊಗರಿ ಖರೀದಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು
ಬಾಗಲಕೋಟೆ ಎಪಿಎಂಸಿಯಲ್ಲಿ ಸೋಮವಾರ ತೊಗರಿ ಖರೀದಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಿದರು   

ಬಾಗಲಕೋಟೆ: ರೈತರು ಬೆಳೆದ ಬೆಳೆಗಳ ರಫ್ತು ಕುರಿತಂತೆ ಸೂಕ್ತ ಮಾಹಿತಿ ಒದಗಿಸಲು ಕೃಷಿ ಮಾರಾಟ ಇಲಾಖೆ ಪ್ರಾಂಗಣದಲ್ಲಿ ರಫ್ತು ಮಾಹಿತಿ ಕೇಂದ್ರ ತೆರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸಲಹೆ ನೀಡಿದರು.

ನವನಗರದ ಕೃಷಿ ಉತ್ಪನ್ನ ಮಾರಾಟ ಇಲಾಖೆಯ ಪ್ರಾಂಗಣದಲ್ಲಿ ಆರಂಭಿಸಲಾದ ತೊಗರಿ ಖರೀದಿ ಹಾಗೂ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾವ ಬೆಳೆಗೆ ಯಾವ ರಾಜ್ಯ, ಯಾವ ದೇಶದಲ್ಲಿ ಎಷ್ಟು ಬೇಡಿಕೆ ಇದೆ, ಅಲ್ಲಿನ ದರ, ಬೇಡಿಕೆ ಮತ್ತು ಪೂರೈಕೆ ಕುರಿತಂತೆ ಮಾಹಿತಿ ನೀಡಲು ರಫ್ತು ಮಾಹಿತಿ ಕೇಂದ್ರ ಅವಶ್ಯಕತೆ ಇದೆ ಎಂದರು.

ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ 24 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ ₹8 ಸಾವಿರದಂತೆ  ಖರೀದಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 53,262 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, 66,578 ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ADVERTISEMENT

ಪ್ರತಿ ಎಕರೆಗೆ ನಾಲ್ಕು ಕ್ವಿಂಟಲ್‍ನಂತೆ ಖರೀದಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ತಾಲ್ಲೂಕಿನಲ್ಲಿ ಚಾಲನೆ ನೀಡಲಾಗಿದೆ. ಹುನಗುಂದದಲ್ಲಿ ಈಗಾಗಲೇ 30 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಖರೀದಿ ಕೇಂದ್ರಕ್ಕೆ ಬರಲು ಆಗದ ವೃದ್ಧ ರೈತರ ಮನೆಗೆ ತೆರಳಿ ಬಯೋಮ್ಯಾಟ್ರಿಕ್ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. 

ಈಗಾಗಲೇ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ನಡೆದಿದೆ. ಜಿಲ್ಲೆಯಲ್ಲಿ 47,450 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಖರೀದಿ ಕೇಂದ್ರದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತಹಶೀಲ್ದಾರ್ ವಾಸುದೇವಸ್ಥಾಮಿ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ವಿ.ಡಿ.ಪಾಟೀಲ, ರಾಜ್ಯ ಸಹಕಾರ ಮಾರಾಟ ಮಂಡಳಿ ಜಿಲ್ಲಾ ವ್ಯವಸ್ಥಾಪಕಿ ಸುಪ್ರಿಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.