ADVERTISEMENT

ಮುಧೋಳ | ಕೆರೆ ಒತ್ತುವರಿ: ಸಚಿವ ತಿಮ್ಮಾಪುರ ಕೆಂಡಾಮಂಡಲ

ಕೆಡಿಪಿ‌ ಪ್ರಗತಿ‌ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 8:11 IST
Last Updated 24 ಡಿಸೆಂಬರ್ 2025, 8:11 IST
ಮುಧೋಳದ ಅಂಬೇಡ್ಕರ್ ಭವನದಲ್ಲಿ ನಡೆದ ಕೆಡಿಪಿ‌ ಪ್ರಗತಿ‌ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದರು
ಮುಧೋಳದ ಅಂಬೇಡ್ಕರ್ ಭವನದಲ್ಲಿ ನಡೆದ ಕೆಡಿಪಿ‌ ಪ್ರಗತಿ‌ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದರು   

ಮುಧೋಳ: ‘ಪ್ರಭಾವಿಗಳು ಎಷ್ಟು ಜಾಗದಲ್ಲಿ ಕೆರೆ ಒತ್ತುವರಿ ಮಾಡಿದ್ದಾರೆ. ಕೆರೆಯ ಜಾಗವನ್ನು ಗುರುತಿಸುವಲ್ಲಿ ಏಕೆ ವಿಳಂಬ‌ ಅನುಸರಿಸುತ್ತಿದ್ದೀರಿ’ ಎಂದು ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹರಿಹಾಯ್ದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕೆಡಿಪಿ‌ ಪ್ರಗತಿ‌ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಹಲವು ಬಾರಿ ಸಭೆಯಲ್ಲಿ ತಿಳಿಸಿದರೂ ಒತ್ತುವರಿ ಗುರುತಿಸುವ ಕೆಲಸವಾಗುತ್ತಿಲ್ಲ. ನೀವು ಇದರಲ್ಲಿ ಶಾಮೀಲಾಗಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಗರದಲ್ಲಿ ದೊಡ್ಡ ದೊಡ್ಡವರು ಕೆರೆ ಒತ್ತುವರಿ‌ ಮಾಡಿಕೊಂಡಿದ್ದಾರೆ. ವರದಿ ನೀಡಿ ಎಂದು ಹೇಳಿದರೂ ನೀಡುತ್ತಿಲ್ಲ‌. ಬಡವರಿಗೆ ಮನೆಗಳನ್ನು ನೀಡಲು ಜಾಗ ಇಲ್ಲ’ ಎಂದು ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಹಾಗೂ ಎಡಿಎಲ್ಆರ್ ಚೇತನಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ನಾಗರಾಳ ಗ್ರಾಮದಲ್ಲಿ ಎರಡು ವರ್ಷದಿಂದ ನಡೆದಿರುವ ಕುಡಿಯುವ ನೀರಿನ ಕಾಮಗಾರಿ ಇನ್ನೂ ಪೂರ್ಣವಾಗದಿದ್ದರೆ ಹೇಗೆ. ಬೇಸಿಗೆಯೊಳಗೆ ಪೂರ್ಣಗೊಳಿಸಿ’ ಎಂದು ಸೂಚಿಸಿದರು.

ವಿಶೇಷಚೇತನ ಮಕ್ಕಳ ಅಭಿವೃದ್ದಿ ಅಧಿಕಾರಿ ಮುದ್ನೂರ ಮಾತನಾಡಿ, ‘ಯಾವುದೇ ಯುಡಿಐಡಿ ಕಾರ್ಡ್ ಬಾಕಿ ಇಲ್ಲ. 164 ಆರೈಕೆದಾರರಿಗೆ ಪಿಂಚಣಿ ಕೊಡುತ್ತಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡರು.

‘ನಗರೋತ್ಥಾನದಿಂದ ಅಂಗವಿಕಲರ ಸಮುದಾಯಭವನಕ್ಕೆ ₹68ಲಕ್ಷ ದುಡ್ಡಿದೆ. ನಾವು ₹10ಲಕ್ಷ ತುಂಬಬೇಕು. ನಮ್ಮಲ್ಲಿ ನಿಧಿ ಇಲ್ಲ’ ಎಂದು ಅವರು ಸಭೆಯ ಗಮನಕ್ಕೆ ತಂದರು.

ಅಂಗವಿಕಲ‌‌ ಮಕ್ಕಳ ಫಿಜಿಯೋಥೆರಪಿಗಾಗಿ ಅಂಗವಿಕಲ‌ರ ಕಲ್ಯಾಣ ಇಲಾಖೆಯಿಂದ ₹5ಲಕ್ಷಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ಸಚಿವರು, ‘ದುಡ್ಡು ನಾನು ಕೊಡಿಸುವ ವ್ಯವಸ್ಥೆ ಮಾಡುತ್ತೇನೆ, ಮೊದಲು ಕಾರ್ಯರಂಭ ಮಾಡಿ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಸಿದ್ದರಾಮೇಶ್ವರ ಉಕ್ಕಲಿ, ದುರ್ಗಪ್ಪ, ಮುತ್ತಪ್ಪ ಗಣಿ, ಬಸವರಾಜ ಹುಗ್ಗಿ, ಹೊಳಬಸಪ್ಪ ದಂಡಿನ, ಅಹ್ಮಜದಖಾನ ಮೋಮಿನ, ಮಹಾಂತೇಶ ಮಾಚಕನೂರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಅಂಬಿಗೇರ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.