ADVERTISEMENT

ಪುರಸಭೆ ಸದಸ್ಯೆ ತಳ್ಳಾಡಿದ ಶಾಸಕ ಸಿದ್ದು ಸವದಿ?

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್: ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 20:36 IST
Last Updated 11 ನವೆಂಬರ್ 2020, 20:36 IST
ಸಿದ್ದು ಸವದಿ
ಸಿದ್ದು ಸವದಿ   

ಬಾಗಲಕೋಟೆ: ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ವೇಳೆ ಮತದಾನ ಮಾಡಲು ಬಂದ ತಮ್ಮದೇ ಪಕ್ಷದ ಸದಸ್ಯೆಯನ್ನು ಬಿಜೆಪಿ ಶಾಸಕ ಸಿದ್ದು ಸವದಿ ಅಡ್ಡಗಟ್ಟಿ, ಅವರ ಬೆಂಬಲಿಗರ ಗುಂಪು ಆಕೆಯನ್ನು ಹಿಡಿದು–ಎಳೆದಾಡಿ ಅಸಭ್ಯವಾಗಿ ವರ್ತಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ತಮ್ಮದೇ ಪಕ್ಷದ ಮೂವರು ಸದಸ್ಯರು ಅಡ್ಡಮತದಾನ ಮಾಡಬಹುದು ಎಂಬ ಗುಮಾನಿಯ ಮೇಲೆ ಅವರನ್ನು ತಡೆಯುವ ಪ್ರಯತ್ನದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮತದಾನಕ್ಕೆ ಹೊರಟ ವಾರ್ಡ್ ಸಂಖ್ಯೆ 4ರ ಸದಸ್ಯೆ ಚಾಂದಿನಿ ನಾಯಕ ಅವರನ್ನು ವಾಪಸ್ ಹೋಗುವಂತೆ ಬೆಂಬಲಿಗರು ತಳ್ಳಾಡಿದ್ದಾರೆ. ನಂತರ ಶಾಸಕ ಸಿದ್ದು ಸವದಿ ಸದಸ್ಯೆಯನ್ನು ತಡೆಯುತ್ತಾರೆ. ಆಗ ತಳ್ಳಾಟ ನಡೆದು ಚಾಂದಿನಿ ಮೆಟ್ಟಿಲಿನಿಂದ ಉರುಳಿ ಬೀಳುತ್ತಾರೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

‘ನಾನು ಪಕ್ಷದ ಸದಸ್ಯರಿಗೆ ವಿಪ್ ಕೊಡಲು ಹೋಗಿದ್ದೆ. ಈ ವೇಳೆ ಆದ ನೂಕಾಟ–ತಳ್ಳಾಟದಿಂದ ಸದಸ್ಯೆಯನ್ನು ರಕ್ಷಿಸಿದ್ದೇನೆ ಹೊರತು ಹಲ್ಲೆ ಮಾಡಿಲ್ಲ. ಕಾರ್ಯಕರ್ತರು ಮಾಡಿದ ತಪ್ಪಿಗೆ ಕ್ಷಮೆ ಕೋರುವೆ’ ಎಂದು ಶಾಸಕ ಸಿದ್ದು ಸವದಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.