ADVERTISEMENT

ಬಾಗಲಕೋಟೆ | ರೈತ ಯುವಕರಿಗೆ ಕನ್ಯೆ ಕೊಡದ ಸ್ಥಿತಿ ಇದೆ: ಶಾಸಕ ಸಿದ್ದು ಸವದಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 8:20 IST
Last Updated 23 ಡಿಸೆಂಬರ್ 2025, 8:20 IST
ಬಾಗಲಕೋಟೆಯಲ್ಲಿ ನಡೆದಿರುವ ತೋಟಗಾರಿಕೆ ಮೇಳದಲ್ಲಿ ಸೋಮವಾರ ಫಲಶ್ರೇಷ್ಠ ರೈತರನ್ನು ಶಾಸಕ ಸಿದ್ದು ಸವದಿ ಸನ್ಮಾನಿಸಿದರು
ಬಾಗಲಕೋಟೆಯಲ್ಲಿ ನಡೆದಿರುವ ತೋಟಗಾರಿಕೆ ಮೇಳದಲ್ಲಿ ಸೋಮವಾರ ಫಲಶ್ರೇಷ್ಠ ರೈತರನ್ನು ಶಾಸಕ ಸಿದ್ದು ಸವದಿ ಸನ್ಮಾನಿಸಿದರು   

ಬಾಗಲಕೋಟೆ: ‘ಯುವ ರೈತರಿಗೆ ಕನ್ಯೆ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಸರ್ಕಾರದ ಸಣ್ಣ ನೌಕರಿಯಲ್ಲಿದ್ದರೂ ಕನ್ಯೆ ಕೊಡುತ್ತಾರೆ. ಸರ್ಕಾರಿ ಅಧಿಕಾರಿ ಪಡೆಯುವ ವೇತನವನ್ನು ಒಂದು ಎಕರೆಯಲ್ಲಿ ರೈತ ತೆಗೆಯಬಲ್ಲ. ಜನರು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು’ ಎಂದು ಶಾಸಕ ಸಿದ್ದು ಸವದಿ ಸಲಹೆ ನೀಡಿದರು.

ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಎರಡನೇ ದಿನದ ತೋಟಗಾರಿಕೆ ಮೇಳದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ‘ವಿದ್ಯಾವಂತರು, ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ಗಳಿಸುವತ್ತ ಗಮನ ಹರಿಸಬೇಕು’ ಎಂದರು.

‘ವಿಶ್ವವಿದ್ಯಾಲಯ ಹೊರತಂದ ತಳಿಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ರಾಸಾಯನಿಕ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿಯತ್ತ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ. ಆರೋಗ್ಯ ಹೆಚ್ಚಿಸುವ ಆಹಾರ ಉತ್ಪಾದನೆಗೆ ಮುಂದಾಗಿರಿ. ಗುಣಮಟ್ಟದ ಬೆಳೆ ಬೆಳೆಯಲು ಮುಂದಾಗಬೇಕು’ ಎಂದರು.

ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪರಶಿವಮೂರ್ತಿ ಮಾತನಾಡಿ, ‘ಆಹಾರ ಉತ್ಪಾದನೆಯಲ್ಲಿ ದೇಶ ತನ್ನ ಕಾಲ ಮೇಲೆ ನಿಂತಿದೆ. ಬೇರೆ ದೇಶಕ್ಕೆ ಇಲ್ಲಿಯ ಗೋಧಿ ರಫ್ತಿಗೆ ಬೇಡಿಕೆ ಇದೆ. ರೈತರಿಗೆ ಮುಖ್ಯವಾಗಿ ಮಾರಾಟದ ಸಮಸ್ಯೆ ಇದೆ. ರೈತ ಉತ್ಪಾದಕ ಸಂಘಗಳಲ್ಲಿ ಕೆಲವೇ ಕೆಲವು ಚೆನ್ನಾಗಿ ಕೆಲಸ ಮಾಡುತ್ತಿವೆ. ಇವುಗಳು ಬಲಿಷ್ಠವಾದಲ್ಲಿ ಮಧ್ಯವರ್ತಿಗಳಿಲ್ಲದೇ ನೇರ ಮಾರುಕಟ್ಟೆ ದೊರೆಯುತ್ತದೆ’ ಎಂದು ಹೇಳಿದರು.

ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕೆ.ಎಂ.ಹರಿಣಿಕುಮಾರ ಮಾತನಾಡಿ, ‘ಕೃಷಿ ಚೆನ್ನಾಗಿದ್ದಲ್ಲಿ ಮಾತ್ರ ನಾವು ಚೆನ್ನಾಗಿರಲು ಸಾಧ್ಯ. ಸಮುದಾಯ ಕೃಷಿಯತ್ತ ಎಲ್ಲರೂ ವಾಲಬೇಕಿದೆ. ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ’ ಎಂದರು.

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಪಲತಿ ವಿ.ಐ.ಬೆಣಗಿ ಮಾತನಾಡಿ, ‘ವಿಷಯುಕ್ತ ಆಹಾರ ಸೇವನೆಯಿಂದ ಚೈತನ್ಯ ಶಕ್ತಿ ಶೇ50ರಷ್ಟು ಕಡಿಮೆ ಆಗಿದೆ. ವಿಪರೀತ ರಾಸಾಯನಿಕಗಳ ಬಳಕೆಯಿಂದ ಬೆಳೆದ ಆಹಾರ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಮಣ್ಣಿನ ಫಲವತ್ತದೆ ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ’ ಎಂದು ಹೇಳಿದರು.

ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ ಮಾತನಾಡಿದರು. ಶಾಸಕ ವಿಜಯಾನಂದ ಕಾಶಪ್ಪನವರ, ತೋಟಗಾರಿಕೆ ವಿವಿ ಕುಲಪತಿ ವಿಷ್ಣುವರ್ಧನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ರವೀಂದ್ರ ಬೆಳ್ಳಿ, ಮಧುಮತಿ ಆಂಡ್ರಾಸ್, ರವೀಂದ್ರ ಹಕಾಟಿ, ರುದ್ರೇಶ ಟಿ.ಎಸ್ ಇದ್ದರು.

ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ

ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ಪ್ರ‌ದಾನ ಮಾಡಲಾಯಿತು. ಮೈಸೂರು ಜಿಲ್ಲೆಯ ಜಗದೀಶ ಪಿ ಚಾಮರಾಜನಗರ ಜಿಲ್ಲೆಯ ಸಿದ್ದೇಗೌಡ ಎನ್ ಮಂಡ್ಯ ಜಿಲ್ಲೆಯ ಎಚ್.ಎನ್.ಸತ್ಯನಾರಾಯಣ ಹಾಸನ ಜಿಲ್ಲೆಯ ಲಕ್ಷ್ಮಿ ಟಿ.ಎಂ ಧಾರವಾಡ ಜಿಲ್ಲೆಯ ಕಲಾವತಿ ಚವನಗೌಡರ ಗದಗ ಜಿಲ್ಲೆಯ ಭೀಮರಾವ್ ಶಿಂಧೆ ಹಾವೇರಿಯ ನಾಗರಾಜ ಶಿವಾನಂದ ಹುಲಗೂರ ಹಾಗೂ ಬೆಳಗಾವಿ ಜಿಲ್ಲೆಯ ಬಾಳಪ್ಪ ಬೆಳಕೂಡ ಪ್ರಶಸ್ತಿ ಪುರಸ್ಕೃತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.