
ಅಮೀನಗಡ: ‘ವಿಜಯನಗರ ಸಾಮ್ರಾಜ್ಯದ ಪ್ರೌಢ ದೇವರಾಯನ ಆಸ್ಥಾನ ಗುರುವಾಗಿದ್ದ ಮೊಗ್ಗಿ ಮಾಯಿದೇವನ ಇತಿಹಾಸವನ್ನು ನಾಡಿಗೆ ಪರಿಚಯಿಸುವ ಕಾರ್ಯದಲ್ಲಿ ನಾವೆಲ್ಲ ತೊಡಗಿಕೊಳ್ಳಬೇಕು’ ಎಂದು ಗುಳೇದಗುಡ್ಡ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಹಿರೇಮಾಗಿಯ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಮೊಗ್ಗಿ ಮಾಯಿದೇವರ 644ನೇ ಜಯಂತ್ಯುತ್ಸವದಲ್ಲಿ ಭಾನುವಾರ ನಡೆದ ವಿವಿಧ ಸಾಧಕರಿಗೆ ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಹಿರೇಮಾಗಿ ಗ್ರಾಮದಲ್ಲಿ ಜನಿಸಿದ ಮೊಗ್ಗಿ ಮಾಯಿದೇವ ವಿಜಯನಗರ ಸಾಮ್ರಾಜ್ಯದಲ್ಲಿ ಗುರುವಾಗಿದ್ದ ಎನ್ನುವದು ಇತಿಹಾಸ. ಕೆಲವು ವಚನಗಳನ್ನು ರಚಿಸಿದ್ದು ಅವುಗಳನ್ನು ನಾಡಿಗೆ ಪರಿಚಯಿಸುವ ಕಾರ್ಯವಾಗಬೇಕು’ ಎಂದರು.
ಬಿಜಕಲ್ಲ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ‘ಜಾತ್ರೆ ಮತ್ತು ಉತ್ಸವಗಳು ಗ್ರಾಮದಲ್ಲಿ ಐಕ್ಯತೆ ಮೂಡಿಸುತ್ತವೆ. ಶಾಂತಿ, ಸಹನೆಯಿಂದ ಬಾಳ್ವೆ ನಡೆಸಿದಾಗ ಬದುಕು ಸಾರ್ಥಕವಾಗುತ್ತದೆ’ ಎಂದರು.
ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಶಶಿಧರ ಹಳ್ಳೂರ, ಸಂಗಮೇಶ ಅಂಗಡಿ, ಎಚ್. ಡಿ ವೈದ್ಯ, ಮುತ್ತು ವಡ್ಡರ ಸೇರಿದಂತೆ ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು.
ಹುಲಿಗೆಮ್ಮ ದೇವಸ್ಥಾನದ ಚನ್ನಬಸಪ್ಪಜ್ಜ, ಕೆಂಚಪ್ಪಜ್ಜ, ಕೃಷ್ಣ ಅಜ್ಜ, ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಹನುಮಂತ ಎಮ್ಮೆಟ್ಟಿ, ಗೌರವಾಧ್ಯಕ್ಷ ರಾಮನಗೌಡ ಕೆಸರಪೆಂಟಿ, ರಮೇಶ ಚಿತ್ತರಗಿ, ನಾಗನಗೌಡ ಬಾದವಾಡಗಿ, ಬಾಳನಗೌಡ ಪಾಟೀಲ, ಉಮೇಶ ಬಡಿಗೇರ ಇದ್ದರು.
ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಮೆರವಣಿಗೆ: ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಮಲಿಂಗೇಶ್ವರ ದೇವರಿಗೆ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು.
ಸಂಜೆ ಹಿರೇಮಾಗಿ, ಖೈರವಾಡಗಿ, ಮಾದಾಪುರ, ಗಂಗೂರ, ಇನಾಮಬೂದಿಹಾಳ ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತ ಸಮೂಹದ ಮಧ್ಯೆ ರಾಮಲಿಂಗೇಶ್ವರ ದೇವರ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.