ADVERTISEMENT

ಮುಧೋಳ | ದರ ಒಪ್ಪದ ರೈತರು: ಮುಂದುವರಿದ ಹೋರಾಟ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 3:07 IST
Last Updated 11 ನವೆಂಬರ್ 2025, 3:07 IST
<div class="paragraphs"><p>ಮುಧೋಳದಲ್ಲಿ ಸೋಮವಾರ ಕಬ್ಬಿನ ದರಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು</p></div>

ಮುಧೋಳದಲ್ಲಿ ಸೋಮವಾರ ಕಬ್ಬಿನ ದರಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು

   

ಮುಧೋಳ: ಹಿಂದಿನ ವರ್ಷಗಳ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಈ ವರ್ಷ ಸರ್ಕಾರ ನಿಗದಿಪಡಿಸಿರುವ ಬೆಲೆಯನ್ನು ನಾವು ಒಪ್ಪವುದಿಲ್ಲ. ನಮಗೆ ನ್ಯಾಯುತ ಬೆಲೆ ನೀಡಬೇಕು ಎಂದು ಆಗ್ರಹಿಸಿ ರೈತರು ಭಾನುವಾರವೂ ಪ್ರತಿಭಟನಾ ಮೆರವಣಿಗೆ ನಡಿಸಿ ಲೋಕಪಯೋಗಿ ಇಲಾಖೆ, ಕೃಷಿ ಇಲಾಖೆ ಮತ್ತು ತಹಶೀಲ್ದಾರ್ ಕಚೇರಿಗಳನ್ನು ಬಂದ್ ಮಾಡಿ ಹೋರಾಟ ನಡೆಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಜೆ 5 ರಿಂದ ರಾಜ್ಯ ಹೆದ್ದಾರಿ ಬಂದ್ ಮಾಡಿ ವಾಹನ ಸಂಚಾರ ತಡೆಯಲಾಗಿದೆ. ರೈತರು ರಸ್ತೆಯಲ್ಲಿ ಅಡುಗೆ ಮಾಡಿ ಊಟ ಮಾಡಿದರು.

ADVERTISEMENT

ಸಾವಿರಾರು ಸಂಖ್ಯೆಯಲ್ಲಿ ರೈತರು ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಪ್ರತಿಭಟನೆ ಮೆರವಣಿಗೆ ಪ್ರಾರಂಭಿಸಿ, ತಹಶೀಲ್ದಾರ್ ಕಚೇರಿಗೆ ಬಂದು ಮುತ್ತಿಗೆ ಹಾಕಿ ಮುಖ್ಯದ್ವಾರ ಬಂದ್‌ ಮಾಡಿ ಪ್ರತಿಭಟಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ‘ಸಕ್ಕರೆ ಕಾರ್ಖಾನೆ ಮಾಲೀಕರು ಹಿಂದಿನ ಬಾಕಿ ನೀಡಿರುವ ಬಗ್ಗೆ ನಮಗೆ‌ ಸ್ಪಷ್ಟ ಮಾಹಿತಿ ನೀಡಬೇಕು. ಈ ವರ್ಷ ₹3,500 ಮೊದಲ ಕಂತಿನ ಕಳೆದ ವರ್ಷದ ಎರಡನೇ ಕಂತಿನ ಹಣ ₹500 ನೀಡಬೇಕು ಎಂದು ಒತ್ತಾಯಿಸಿದರು.

ರಿಕವರಿ ಆಧಾರದ ದರ ಒಪ್ಪಿದರೆ ರೈತರಿಗೆ ಕನಿಷ್ಠ ₹300-₹400 ನಷ್ಟವುಂಟಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿ ಹೊರಡಿಸಿರುವ ದರ ಆದೇಶವನ್ನು‌ ವಾಪಸ್ ಪಡೆಯಬೇಕು. ಎಫ್‌ಆರ್‌ಪಿ‌ ದರ ನಮಗೆ ಒಪ್ಪಿಗೆ ಇಲ್ಲ. ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಸಿ.ಎಂ ಅವರು ರೈತರಿಗೆ ಅನ್ಯಾಯ ಮಾಡಿದ್ದಾರೆ. ಕೂಡಲೇ ನಿಮ್ಮ ಆದೇಶ ಹಿಂಪಡೆಯಿರಿ. ನಮ್ಮ ಕಬ್ಬಿಗೆ ನಾವೇ ದರ ನಿಗದಿ‌ ಮಾಡಿಕೊಳ್ಳುತ್ತೇವೆ. ಯಾರೂ ಕಬ್ಬು ಕಟಾವು ಮಾಡಬಾರದು, ಕಟಾವು ಮಾಡಿದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಕಾರಣ’ ಎಂದು ಎಚ್ಚರಿಕೆ ನೀಡಿದರು.

ಮುಧೋಳದಲ್ಲಿ ಒಂದು ತಿಂಗಳು ಪ್ರತಿಭಟನೆ ನಡೆಸಿದರೂ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಬಂದು ನಮ್ಮ ಕಷ್ಟ ಆಲಿಸಿಲ್ಲ. ಉಸ್ತುವಾರಿ ಮಂತ್ರಿಗಳು ಅಧಿಕಾರ ಇಲ್ಲದಾಗ ನಮ್ಮ ಹೋರಾಟಕ್ಕೆ ಬೆಂಬಲ ನೀಡಲು ಬಂದಿದ್ದರು. ಆಗ ಜೋರು ಧ್ವನಿಯಲ್ಲಿ ಅಂದಿನ ಸರ್ಕಾರದ ವಿರುದ್ಧ ಮಾತನಾಡಿದ್ದರು‌. ಅಧಿಕಾರದಲ್ಲಿದ್ದಾಗ ಒಂದು, ಇಲ್ಲದಾಗ ಒಂದು ರೀತಿಯಲ್ಲಿ ಮಾತನಾಡುವುದನ್ನು ಬಿಟ್ಟು ರೈತರ ಬದ್ಧತೆ ಕಾಪಾಡಲು ಮುಂದಾಗಿ ಎಂದು ಆಗ್ರಹಿಸಿದರು.

ರೈತ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿದರು. ದುಂಡಪ್ಪ ಯರಗಟ್ಟಿ, ಸುಭಾಷ ಶಿರಬೂರ, ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ಮಹೇಶಗೌಡ ಪಾಟೀಲ, ಹನಮಂತ ಬಿರಾದಾರ ಪಾಟೀಲ, ಸುರೇಶ ಚಿಚಂಲಿ, ಸುರೇಶ ಡವಳೇಶ್ವರ, ರಾಚಪ್ಪ ಕಲ್ಲೋಳಿ ಇದ್ದರು.

ಮುಧೋಳದಲ್ಲಿ ಸೋಮವಾರ ಕಬ್ಬಿನ ದರಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು
ಮುಧೋಳದಲ್ಲಿ ಸೋಮವಾರ ಕಬ್ಬಿನ ದರಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು
ಮುಧೋಳದಲ್ಲಿ ಸೋಮವಾರ ಕಬ್ಬಿನ ದರಕ್ಕೆ ಆಗ್ರಹಿಸಿ ಕಬ್ಬು ಬೆಳೆಗಾರರು ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.