ADVERTISEMENT

ರನ್ನ ವೈಭವ ಉತ್ಸವಕ್ಕೆ ಸಜ್ಜಾದ ಮುಧೋಳ

ಮೂಲೆಗುಂಪಾಗಿದ್ದ ರನ್ನ ಗದಾಯುದ್ದದ ಗದೆಗಳಿಗೆ ಬಣ್ಣ ಬಳೆಯುವ ಕಾರ್ಯ

ಉದಯ ಕುಲಕರ್ಣಿ
Published 15 ಫೆಬ್ರುವರಿ 2025, 4:44 IST
Last Updated 15 ಫೆಬ್ರುವರಿ 2025, 4:44 IST
ರನ್ನ ವೈಭವದ ಲೋಗೊ
ರನ್ನ ವೈಭವದ ಲೋಗೊ   

ಮುಧೋಳ: ಜಿಲ್ಲಾಡಳಿತದಿಂದ ಫೆ. 22ರಿಂದ 24ರ ವರೆಗೆ ನಡೆಯಲಿರುವ ರನ್ನ ವೈಭವದ ಸಿದ್ಧತೆಗಳು ಭರದಿಂದ ಸಾಗಿವೆ. ನಗರವು ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. 

26 ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಎಸ್.ಪಿ., ಜಿಲ್ಲಾ ಪಂಚಾಯ್ತಿ ಸಿಇಒ, ಜಮಖಂಡಿಯ ಎಸಿ, ಡಿಎಸ್‍ಪಿ ಅವರ ನೇತೃತ್ವದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ.

ರನ್ನ ವೈಭವದ ಪ್ರಯುಕ್ತ ಈಗಾಗಲೇ ಮೂಲೆಗುಂಪಾಗಿದ್ದ ರನ್ನ ಗದಾಯುದ್ದದ ಗದೆಗಳಿಗೆ ಬಣ್ಣ ಬಳೆಯುವ ಕಾರ್ಯ ನಡೆಯುತ್ತಿದೆ. ರನ್ನ ಭವನ, ಗ್ರಂಥಾಲಯ, ಕಸಾಪ ಕಟ್ಟಡದ ಸುತ್ತಮುತ್ತ ರನ್ನ ಸ್ನೇಹಿ ಬಳಗ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದೆ.

ADVERTISEMENT

ರನ್ನ ರಥಯಾತ್ರೆಗೆ ಫೆ.13ರಂದು ರನ್ನ ಬೆಳಗಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಚಾಲನೆ ನೀಡಿದರು. ಪ್ರತಿ ಗ್ರಾಮಕ್ಕೂ ಸಂಚರಿಸುವ ರಥಯಾತ್ರೆಗೆ ವ್ಯಾಪಕ ಸ್ವಾಗತ ಸಿಗುತ್ತಿದೆ. ಪಕ್ಷಭೇದ ಮರೆತು ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದಾರೆ.

ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ, ಸಾಂಸ್ಕೃತಿಕ ಉತ್ಸವ ಮುಧೋಳದಲ್ಲಿ ರನ್ನ ಹೆಸರಿನಲ್ಲಿ ವೈಭವ ಮರುಕಳಿಸಲಿ ಎಂದು 2012ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಗೋವಿಂದ ಕಾರಜೋಳ ರನ್ನ ವೈಭವನ್ನು ಆರಂಭಿಸಿದರು.

ಬಳಿಕ 2014, 2015, 2018 ರಲ್ಲಿ ವೈಭವ ನಡೆದ ಬಳಿಕ ಕೋವಿಡ್ ಕಾರಣದಿಂದ ನಿಂತು ಹೋಗಿತ್ತು. ಇದೀಗ ಆರು ವರ್ಷಗಳ ನಂತರ ರನ್ನ ವೈಭವ ಮರುಕಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರರ ಶ್ರಮ ಇದಕ್ಕೆ ಕಾರಣವಾಗಿದೆ.

ತಾಲ್ಲೂಕು, ಜಿಲ್ಲೆಗೆ ಮಾತ್ರ ರನ್ನ ವೈಭವ ಸೀಮಿತವಾಗಿತ್ತು. ಈ ಸಲ ರನ್ನ ರಥಯಾತ್ರೆಗೆ ಬೆಂಗಳೂರಿನಲ್ಲಿ ಫೆ.18 ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸತೀಶ ಜಾರಕಿಹೊಳಿ ಹಾಗೂ  ಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಎಸ್‍ಪಿ ಅವರನಾಥರೆಡ್ಡಿ, ಜಿಲ್ಲಾ ಪಂಚಾಯ್ತಿ ಸಿಇಒ ಶಶಿಧರ ಕುರೇರ, ಎಸಿ ಸ್ವೇತಾ ಬೀಡಿಕರ, ಡಿಎಸ್‍ಪಿ ಶಾಂತವೀರ ಮುಂತಾದ ಜಿಲ್ಲಾ ಮತ್ತು ವಿಭಾಗ ಮಟ್ಟದ ಎಲ್ಲ ಅಧಿಕಾರಿಗಳು ಮುಧೋಳದಲ್ಲಿ ಬೀಡು ಬಿಟ್ಟು ಕಾರ್ಯ ಮಾಡುತ್ತಿರುವದು ವಿಶೇಷ.

ರನ್ನ ವೈಭವ 2025ರ ಅಂಗವಾಗಿ ನಾಡಿನ ಶ್ರೇಷ್ಠ ಕವಿ, ಕವಯತ್ರಿಯರು, ಕಲಾವಿದರು. ನಟ-ನಟಿಯರು, ಸಂಗೀತ ರಸದೌತಣ, ನೃತ್ಯ, ಅಂತರ ರಾಜ್ಯದ ಕಲಾ ತಂಡಗಳು ಪಾಲ್ಗೊಂಡು, ಕಲಾ ವೈಭವವನ್ನು ಪ್ರದರ್ಶಿಸಲಿದ್ದಾರೆ. ಸಕಲ ಕಲಾ ವಿದ್ವಾಂಸರ ಸಮಾಗಮವು ಈ ಬಾರಿಯ ರನ್ನ ವೈಭವದ ವಿಶೇಷತೆಯಾಗಲಿದೆ.

ರನ್ನ ಪ್ರತಿಷ್ಠಾನದ ವತಿಯಿಂದ ರನ್ನ 2014ರಲ್ಲಿ ಜರುಗಿದ ರನ್ನ ಉತ್ಸವದಲ್ಲಿ ಹಳಗನ್ನಡ ಪ್ರಶಸ್ತಿಯನ್ನು ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ನೀಡಲಾಗಿತ್ತು. ಡಾ.ಷ.ಶೆಟ್ಟರ, ಹಂಪ ನಾಗರಾಜಯ್ಯ, ವೆಂಕಟಾಚಲಯ್ಯ ಅವರಿಗೆ ನೀಡಿಲಾಗಿತ್ತು. ಈ ಸಲ ಒಟ್ಟು ಆರು ಜನರಿಗೆ ಪ್ರಶಸ್ತಿ ನೀಡಬೇಕಾಗಿದೆ.

ಮುಧೋಳದ ರನ್ನ ಸಾಂಸ್ಕೃತಿಕ ಭವನದಲ್ಲಿ ಗದೆಗೆ ಬಣ್ಣ ಬಳೆಯುತ್ತಿರುವ ಚಿತ್ರಕಲಾ ಶಿಕ್ಷಕರು ಹಾಗೂ ಕಲಾವಿದರು
ಆರು ವರ್ಷಗಳ ನಂತರ ಮರುಕಳಿಸುತ್ತಿದೆ ರನ್ನ ವೈಭವ  ರನ್ನ ರಥಯಾತ್ರೆಗೆ ಬೆಂಗಳೂರಿನಲ್ಲಿ ಫೆ.18ರಂದು ಸಿಎಂ ಚಾಲನೆ ಕಲಾ ವೈಭವದ ಪ್ರದರ್ಶನ. ಸಕಲ ಕಲಾ ವಿದ್ವಾಂಸರ ಸಮಾಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.