ADVERTISEMENT

ಮುಧೋಳ | ಪೂರ್ಣಾವಧಿ ತಹಶೀಲ್ದಾರ್ ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:56 IST
Last Updated 21 ಜನವರಿ 2026, 5:56 IST
ಮುಧೋಳ ತಾಲ್ಲೂಕಿಗೆ ಪೂರ್ಣಾವಧಿ ತಹಶೀಲ್ದಾರ್ ನೇಮಕ ಮಾಡಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮುಧೋಳ ತಾಲ್ಲೂಕಿಗೆ ಪೂರ್ಣಾವಧಿ ತಹಶೀಲ್ದಾರ್ ನೇಮಕ ಮಾಡಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮುಧೋಳ: ಭ್ರಷ್ಟ ಸರ್ಕಾರ, ಭ್ರಷ್ಟ ಅಬಕಾರಿ ಮಂತ್ರಿಯಿಂದ ತಾಲ್ಲೂಕಿನ ಆಡಳಿತ ವ್ಯವಸ್ಥೆ ಹಳಿತಪ್ಪಿದೆ. 4 ತಿಂಗಳಿಂದ ತಾಲ್ಲೂಕಿಗೆ ತಹಶೀಲ್ದಾರ್ ಇಲ್ಲ. ಲೋಕಾಪುರದಲ್ಲಿ ಪಟ್ಟಣ ಪಂಚಾಯ್ತೆಗೆ ಅಧಿಕಾರಿಗಳು ಇಲ್ಲ. ಪೋಸ್ಟಿಂಗ್ ಸಲುವಾಗಿ ಕೇಳುವ ದುಡ್ಡಿಗೆ ಯಾವ ಅಧಿಕಾರಿಗಳು ತಾಲ್ಲೂಕಿಗೆ ಬರಲು ಒಪ್ಪುತ್ತಿಲ್ಲ. ಹಿಂದೆ ನಮ್ಮ ತಂದೆ ಇದ್ದಗ ಖುಷಿಯಿಂದ ಅಧಿಕಾರಿಗಳು ಬರುತ್ತಿದ್ದರು ಎಂದು ಬಿಜೆಪಿ ಮುಖಂಡ ಅರುಣ ಕಾರಜೋಳ ಆರೋಪಿಸಿದರು.

ತಾಲ್ಲೂಕಿನ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸುವದಕ್ಕೆ 4 ತಿಂಗಳಿಂದ ಪೂರ್ಣಾವಧಿ ತಹಶೀಲ್ದಾರರ್‌ ನೇಮಕಕ್ಕೆ ಆಗ್ರಹಿಸಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಮುಖಂಡರಾದ ರಾಜೇಂದ್ರ ಟಂಕಸಾಲಿ, ಶ್ರೀಶೈಲಗೌಡ ಪಾಟೀಲ, ನಾಗಪ್ಪ ಅಂಬಿ, ಸುರೇಶ ಅಕ್ಕಿಮರಡಿ, ಡಾ.ರವಿ ನಂದಗಾಂವಿ, ಸುನೀಲ ಕಂಬೋಗಿ, ಶಂಕರಗೌಡ ಪಾಟೀಲ, ಆನಂದ ಹವಳಖೋಡ, ಪ್ರದೀಪ ನಿಂಬಾಳಕರ, ಕೃಷ್ಣಾ ಕಟ್ಟಿಮನಿ, ಪ್ರಜ್ವಲ್ ಚಿಮ್ಮಡ, ಸುಶೀಲಾ, ಗುರುಪಾದ ಕುಳಲಿ, ಗಣೇಶ ರಾಠೋಡ ವನಜಾಕ್ಷಿ ಮಂಟೂರ ಮಾತನಾಡಿ, ಏಷ್ಯಾದಲ್ಲಿ ಅತಿ ಹೆಚ್ಚು ಕಂದಾಯ ಬರುವ ತಾಲ್ಲೂಕಿಗೆ ತಹಶಿಲ್ದಾರ್ ಇಲ್ಲ ಎನ್ನುವುದು ನಾಚಿಗೇಡಿನ ಸಂಗತಿ. ಅಬಕಾರಿ ಮಂತ್ರಿ ತಮ್ಮ ಮನೆ ತುಂಬಿಸುಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ. ಮತ ಹಾಕಿದ ಸಾರ್ವಜನಿಕರು ಬೊಬ್ಬೆ ಹೊಡೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಯಾವ ಕಚೇರಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಎಲ್ಲಡೆ ಭ್ರಷ್ಟಾಚಾರ ತಾಂಡವಾಡುತ್ತಿವೆ. ಅನುದಾನವಿಲ್ಲ. ತಾಲ್ಲೂಕಿನಲ್ಲಿ ಒಂದೇ ಒಂದು ಕೆಲಸವಾಗುತ್ತಿಲ್ಲ. ಜನರ ಮುಂದೆ ಕಣ್ಣಿರು ಹಾಕಿ ಗೆದ್ದ ನಂತರ ಮತದಾರರಿಗೆ ಕಣ್ಣಿರು ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವಾರದಲ್ಲಿ ತಹಶೀಲ್ದಾರ್ ನೇಮಕ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ADVERTISEMENT

ಗ್ರಾಮೀಣ ಮಂಡಲ ಅಧ್ಯಕ್ಷ ಸಂಗನಗೌಡ ಕಾತರಕಿ, ನಗರ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ, ಯುವ ಮೋರ್ಚಾ ಅಧ್ಯಕ್ಷ ಅನೂಪ ಚವ್ಹಾನ, ಕಲ್ಲಪ್ಪಣ್ಣ ಸಬರದ, ಅನಂತರಾವ ಘೋರ್ಪಡೆ, ಸದಪ್ಪ ತೇಲಿ, ಬಸು ದಾಸರ ಮುಂತಾದವರು ಭಾಗವಹಿಸಿದ್ದರು.

ತಹಶೀಲ್ದಾರ್ ಕಚೇರಿಯ ಮುಖ್ಯದ್ವಾರವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಜಮಖಂಡಿ ಎಸಿ ಶ್ವೇತಾ ಬೀಡಿಕರ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.