
ರಬಕವಿ ಬನಹಟ್ಟಿ: ಇಲ್ಲಿಯ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯರ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ. ಸಾರ್ವಜನಿಕರಿಂದ ವಸೂಲಿ ಮಾಡಲಾದ ತೆರಿಗೆ ಮತ್ತು ಸರ್ಕಾರದ ಅನುದಾನಗಳನ್ನು ಪರಿಶೀಲನೆ ಮಾಡಿ ಬಜೆಟ್ ಮಂಡನೆ ಮಾಡಲಾಗುವುದು. ಮೂಲ ಸೌಕರ್ಯಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ರಬಕವಿ ಬನಹಟ್ಟಿ ನಗರಸಭೆ ಪೌರಾಯುಕ್ತ ರಮೇಶ ಜಾಧವ ತಿಳಿಸಿದರು.
ಬುಧವಾರ ರಬಕವಿ ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ನಡೆದ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ಬಜೆಟ್ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳ ಅಭಿವೃದ್ಧಿ ಮತ್ತು ಬೀದಿ ದೀಪಗಳ ನಿರ್ವಹಣೆಗೆ ಆದ್ಯತೆ ನೀಡಲು ಗಮನ ನೀಡಲಾಗುವುದು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಕಿರಣ ಆಳಗಿ ಮಾತನಾಡಿ, ‘ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೂತ್ರಾಲಯಗಳ ಕೊರತೆ ಇದ್ದು, ಇದರಿಂದಾಗಿ ಸಾರ್ವಜನಿಕರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಾರ್ವಜನಿಕ ಮೂತ್ರಿಗಳನ್ನು ನಿರ್ಮಾಣ ಮಾಡಬೇಕು. ಅದೇ ರೀತಿಯಾಗಿ ಸ್ಮಶಾನಗಳ ಅಭಿವೃದ್ಧಿಗೂ ಗಮನ ನೀಡಬೇಕು. ಬೀದಿ ನಾಯಿಗಳ ನಿರ್ವಹಣೆಯ ಬಗ್ಗೆ ಗಮನ ನೀಡಬೇಕು ಎಂದು ತಿಳಿಸಿದರು.
ನಗರದ ಮುಖಂಡ ಶಂಕರ ಜಾಲಿಗಿಡದ ಮಾತನಾಡಿ, ಬನಹಟ್ಟಿ ವೈಭವ ಟಾಕೀಸ್ ಮುಂಭಾಗದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
‘ಬೀದಿ ನಾಯಿಗಳ ನಿರ್ವಹಣೆಗೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಪ್ರಕಿಯೆ ನಡೆಯಲಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ವೈಭವ ಚಿತ್ರ ಮಂದಿರದಿಂದ ನೂಲಿನ ಗಿರಣಿಯವರೆಗೆ ಬೀದಿ ದೀಪಗಳನ್ನು ಅಳವಡಿಸಲಾಗುವುದು’ ಎಂದು ಪೌರಾಯುಕ್ತ ತಿಳಿಸಿದರು. ಮತ್ತೊಬ್ಬ ಮುಖಂಡ ಅಶೋಕ ರಾವಳ ಮಾತನಾಡಿದರು.
ಸಭೆಯಲ್ಲಿ ಸುನೀಲಕುಮಾರ ಬಬಲಾದಿ, ಬಾಬುರಾವ ಕಮತಗಿ, ಅಮೀರಖಾನ ಖಲೀಫಾ, ಮುಖೇಶ ಬನಹಟ್ಟಿ, ಭೀಮು ಬಾಡಗಿ, ಶೋಭಾ ಹೊಸಮನಿ, ಮಹಾವೀರ ದೈಗೊಂಡ ಮತ್ತು ಲಕ್ಷ್ಮಿ ತೊನಶ್ಯಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.