ADVERTISEMENT

ಮಹಾಲಿಂಗಪುರ: ಅರ್ಹ ಫಲಾನುಭವಿ ನೇಕಾರರಿಗೆ ವಸತಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:05 IST
Last Updated 1 ನವೆಂಬರ್ 2025, 4:05 IST
ಮಹಾಲಿಂಗಪುರ ಪುರಸಭೆ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸೌಜನ್ಯ ನೇಕಾರರ ಬಡಾವಣೆಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಆಯ್ಕೆ ಮಾಡಿರುವ ಫಲಾನುಭವಿಗಳ ಕುರಿತು ಚರ್ಚೆ ನಡೆಯಿತು
ಮಹಾಲಿಂಗಪುರ ಪುರಸಭೆ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸೌಜನ್ಯ ನೇಕಾರರ ಬಡಾವಣೆಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಆಯ್ಕೆ ಮಾಡಿರುವ ಫಲಾನುಭವಿಗಳ ಕುರಿತು ಚರ್ಚೆ ನಡೆಯಿತು   

ಮಹಾಲಿಂಗಪುರ: ಪಟ್ಟಣದ ಬುದ್ನಿಪಿಡಿಯ ಸೌಜನ್ಯ ನೇಕಾರರ ಬಡಾವಣೆಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಆಯ್ಕೆ ಮಾಡಿರುವ ಫಲಾನುಭವಿಗಳ ಕುರಿತು ಪುರಸಭೆ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ಸದಸ್ಯ ಬಸವರಾಜ ಹಿಟ್ಟಿನಮಠ ಮಾತನಾಡಿ, ‘ಬಡಾವಣೆಗೆ ಮಂಜೂರಾದ 100 ಫಲಾನುಭವಿಗಳಲ್ಲಿ ಶೇ 50ರಷ್ಟು ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಕುರಿತು ಈಗಾಗಲೇ ಆರೋಪ ಮಾಡಲಾಗಿತ್ತು. ಈ ಕುರಿತು ಪರಿಶೀಲಿಸಿದಾಗ 73 ಅರ್ಹ ಹಾಗೂ 27 ಅನರ್ಹ ಫಲಾನುಭವಿಗಳು ಕಂಡು ಬಂದಿದ್ದು, ಕೂಡಲೇ ಅನರ್ಹರನ್ನು ರದ್ದು ಮಾಡಿ ಅರ್ಹರನ್ನು ಆಯ್ಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ಬಸವರಾಜ ಚಮಕೇರಿ, ರವಿ ಜವಳಗಿ, ‘ಯೋಜನೆಗೆ 50 ಫಲಾನುಭವಿಗಳು ಮಾತ್ರ ಅರ್ಹರಿದ್ದಾರೆ. ಇನ್ನುಳಿದ 50 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆಗಿರುವ ಜಿಪಿಎಸ್ ರದ್ದುಪಡಿಸಿ ಅರ್ಹರ ಪಟ್ಟಿ ತಯಾರಿಸಬೇಕು’ ಎಂದು ಪಟ್ಟು ಹಿಡಿದರು.

ADVERTISEMENT

ಅಧ್ಯಕ್ಷ ಯಲ್ಲನಗೌಡ ಪಾಟೀಲ ಮಾತನಾಡಿ, ‘ವಸತಿ ಸೌಲಭ್ಯಕ್ಕೆ ಅರ್ಹರಿರುವ 73 ಫಲಾನುಭವಿಗಳ ಹೆಸರನ್ನು ಈಗಾಗಲೇ ಜಿಪಿಎಸ್ ಮಾಡಲಾಗಿದೆ. ಉಳಿದ 27 ಅರ್ಹ ಫಲಾನುಭವಿ ನೇಕಾರರನ್ನು ಆಯ್ಕೆ ಮಾಡಿ ಅವರಿಗೆ ಯೋಜನೆ ಸೌಲಭ್ಯ ಒದಗಿಸಲಾಗುವುದು’ ಎಂದರು.

‘ರಾಜೀವ ಗಾಂಧಿ ಯೋಜನೆಯಡಿ ಮಂಜೂರಾಗಿದ್ದ 180 ಮನೆಗಳಲ್ಲಿ 93 ಮನೆಗಳಿಗೆ ಮಾತ್ರ ಅರ್ಜಿ ನೀಡಲಾಗಿತ್ತು. ಆದರೆ, ಆ ಅರ್ಜಿಗಳನ್ನು ವಿಲೇವಾರಿ ಮಾಡಲು ನಿರ್ಲಕ್ಷ್ಯದಿಂದ ರದ್ದು ಮಾಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಬೇಕು’ ಎಂದು ಬಸವರಾಜ ಚಮಕೇರಿ ಆಗ್ರಹಿಸಿದರು.

ಮನೆ ಮನೆಗೆ ಕಸ ಸಂಗ್ರಹಿಸುವ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕುರಿತು ಕಿರಿಯ ಎಂಜಿನಿಯರ್ ಆರ್.ಎಚ್.ಚವಾಣ ನೀಡಿದ ಸಲಹೆಗೆ ಸಭೆ ಅನುಮೋದನೆ ನೀಡಿತು. ಪಟ್ಟಣದಲ್ಲಿ ಹಾಕಿರುವ ಶುಭಾಶಯ ಕೋರುವ ಬ್ಯಾನರ್‌ಗಳನ್ನು ತೆರವುಗೊಳಿಸಿ ಸಂಬಂಧಿಸಿದವರಿಗೆ ದಂಡ ಹಾಕಲು ಹಾಗೂ ಇನ್ನು ಮುಂದೆ ಹಾಕುವ ಬ್ಯಾನರ್‌ಗಳಿಗೆ ದರ ನಿಗದಿಪಡಿಸಲು ಸಭೆ ಒಪ್ಪಿಗೆ ನೀಡಿತು.

ಕೆಂಗೇರಿಮಡ್ಡಿಯಲ್ಲಿ ಸ್ಲಂಬೋರ್ಡ್‍ನಿಂದ ನಿರ್ಮಾಣವಾಗುತ್ತಿರುವ ಜಿ+ ಒನ್ ಮಾದರಿ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿರುವ ಕುರಿತು ಸದಸ್ಯ ಬಸವರಾಜ ಚಮಕೇರಿ ಗಮನಸೆಳೆದಾಗ, ‘ಈ ಕುರಿತು ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ಬೇರೆ ಗುತ್ತಿಗೆದಾರನಿಗೆ ಟೆಂಡರ್ ನೀಡುವ ಕುರಿತು ಸ್ಲಂ ಬೋರ್ಡ್‍ನಲ್ಲಿ ಚರ್ಚೆ ನಡೆಸಲಾಗಿದೆ’ ಎಂದು ಮುಖ್ಯಾಧಿಕಾರಿ ಎನ್.ಎ.ಲಮಾಣಿ ತಿಳಿಸಿದರು.

ಅಂಗವಿಕಲರಿಗೆ ಪೂರೈಸಲು ಖರೀದಿಸಲಾಗಿರುವ ತ್ರಿಚಕ್ರ ವಾಹನ ಮೂಲೆ ಸೇರಿರುವ ಕುರಿತು ಚರ್ಚೆ ನಡೆದು, ಕೂಡಲೇ ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡಿ ವಾಹನ ವಿತರಿಸಲು ಸಭೆ ಅನುಮೋದನೆ ನೀಡಿತು.

ಪುರಸಭೆ ವ್ಯಾಪ್ತಿಯಲ್ಲಿನ ಕೌಜಲಗಿ ನಿಂಗಮ್ಮ ಸಾಂಸ್ಕೃತಿಕ ಭವನದ ಬಾಡಿಗೆ ದರ ಹೆಚ್ಚಾಗಿದ್ದರಿಂದ ಯಾರೂ ಕಾರ್ಯಕ್ರಮ ನಡೆಸಲು ಮುಂದೆ ಬರುತ್ತಿಲ್ಲ. ಹೀಗಾಗಿ, ದರ ಪರಿಷ್ಕರಿಸಲು ಸಭೆಯಲ್ಲಿ ಚರ್ಚೆ ನಡೆಯಿತು. ಬಾಡಿಗೆ ದರ ಕಡಿಮೆ ಮಾಡಲು ಸದಸ್ಯರು ಒಪ್ಪಿಗೆ ಸೂಚಿಸಿದರು.

ವಿವಿಧ ಅನುದಾದಡಿಯಲ್ಲಿ ಕಾಮಗಾರಿ ದರಗಳಿಗೆ ದರ ಮಂಜೂರಾತಿ ನೀಡಿದರ ಬಗ್ಗೆ, 2020-21 ರಿಂದ 2024-25ನೇ ಸಾಲಿನ ಎಸ್‍ಎಫ್‍ಸಿ ಮುಕ್ತನಿಧಿ ಉಳಿಕೆ ಅನುದಾನ ಕ್ರಿಯಾ ಯೋಜನೆ ದರ ಮಂಜೂರಾತಿ ನೀಡಿದ ಬಗ್ಗೆ ಸಭೆ ಅನುಮೋದನೆ ನೀಡಿತು. ಸ್ವಚ್ಛ ಭಾರತ ಅಭಿಯಾನ ಹಾಗೂ ಪರಿಹಾರ ನಿಧಿ ಅಡಿಯಲ್ಲಿ ಅನುಮೋದಿತ ವಿಸ್ತೃತ ಯೋಜನಾ ವರದಿಯಂತೆ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ನಿರ್ವಹಣೆಗೆ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಜಾಗವನ್ನು ಹಸ್ತಾಂತರಿಸಲು ಸಭೆ ಒಪ್ಪಿಗೆ ಸೂಚಿಸಿತು.

ಪುರಸಭೆ ವ್ಯಾಪ್ತಿಯ ಕೆಲವು ಜಮೀನುಗಳಿಗೆ ವ್ಯವಸಾಯ ವಲಯದಿಂದ ವಸತಿ ವಲಯಕ್ಕೆ ಭೂ- ಬದಲಾವಣೆ ಮಾಡುವ ಕುರಿತು ಮಂಜೂರಾತಿ ನೀಡಲು, ಪುರಸಭೆ ವ್ಯಾಪ್ತಿಯ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಜೆಸಿಬಿ ಬಾಡಿಗೆ ದರ ನಿಗದಿಪಡಿಸಲು ಹಾಗೂ ಪುರಸಭೆ ಒಡೆತನದ ಖಾಲಿ ಉಳಿದ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲು ಸಭೆ ಅನುಮೋದನೆ ನೀಡಿತು.

ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.