ಹುನಗುಂದ: ‘ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ತುಂಬ ಮಹತ್ವದ್ದಾಗಿದ್ದು, ಅವರು ಆರೋಗ್ಯವಂತ ಪರಿಸರ ನಿರ್ಮಾಣದ ಸೇನಾನಿಗಳಿದ್ದಂತೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಪುರಸಭೆಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪೌರ ಕಾರ್ಮಿಕರಿಗೆ ಸರ್ಕಾರ ಅನೇಕ ಸೌಲಭ್ಯ ನೀಡುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಪುರಸಭೆ ವತಿಯಿಂದ ನಿವೇಶನ ಮತ್ತು ಕಟ್ಟಡ ನಿರ್ಮಿಸಿ ಕೊಡಲಾಗುವುದು’ ಎಂದರು.
ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಮಾತನಾಡಿ, ‘ಅನೇಕ ಸವಾಲುಗಳ ಮಧ್ಯೆಯೇ ವೃತ್ತಿ ಬದ್ಧತೆ ಮೆರೆಯುವ ಪೌರ ಕಾರ್ಮಿಕರು ಕೇವಲ ಕಾರ್ಮಿಕರಲ್ಲದೆ ನಿಜ ಕಾಯಕ ಜೀವಿಗಳಿದ್ದಂತೆ. ಸಮಾಜದಲ್ಲಿ ಇಂತಹ ವೃತ್ತಿಗಳನ್ನು ಮಾನವೀಯ ನೆಲೆಯಲ್ಲಿ ನೋಡಿದಾಗ ಮಾತ್ರ ಅವುಗಳ ವಾಸ್ತವತೆ ಅರಿಯಬಹುದು’ ಎಂದರು.
ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಪುರಸಭೆಯ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಮಾತನಾಡಿದರು.
ಗಚ್ಚಿನಮಠದ ಅಮರೇಶ್ವರ ದೇವರು ಸಾನ್ನಿಧ್ಯವಹಿಸಿದ್ದರು.
ಪೌರ ಕಾರ್ಮಿಕರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ನೀಡಲಾಯಿತು ಹಾಗೂ ಎಲ್ಲ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ರಾಜವ್ವ ಬದಾಮಿ, ಪುರಸಭೆ ಸದಸ್ಯರಾದ ಚಂದ್ರು ತಳವಾರ, ಮಹ್ಮದ ದೋಟಿಹಾಳ, ಯಲ್ಲಪ್ಪ ನಡುವಿನಮನಿ, ಮೈನು ಧನ್ನೂರ, ಪರವೇಜ್ ಖಾಜಿ, ರಾಜು ಹಡಪದ, ಮಲ್ಲಪ್ಪ ಅಂಟರದಾನಿ, ಮಲ್ಲಣ್ಣ ಹೂಗಾರ, ಸಂಘದ ಅಧ್ಯಕ್ಷ ಮಹಾಂತೇಶ ತಾರಿವಾಳ, ಶ್ರೀನಿವಾಸ ಬದಾಮಿ, ಬಸವರಾಜ ಚಲವಾದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.