ADVERTISEMENT

ಬಾಗಲಕೋಟೆ: ಅತಿವೃಷ್ಟಿಯಿಂದ ₹561 ಕೋಟಿ ಹಾನಿ

ರಸ್ತೆ, ಸೇತುವೆ, ಶಾಲಾ ಕೊಠಡಿ, ವಿದ್ಯುತ್, ಮನೆಗಳಿಗೆ ಧಕ್ಕೆ

ಬಸವರಾಜ ಹವಾಲ್ದಾರ
Published 15 ಸೆಪ್ಟೆಂಬರ್ 2022, 4:29 IST
Last Updated 15 ಸೆಪ್ಟೆಂಬರ್ 2022, 4:29 IST
ಬಾಗಲಕೋಟೆ ಜಿಲ್ಲೆಯ ಗೋವನಕೊಪ್ಪ– ಹೆಬ್ಬಳ್ಳಿ ಗ್ರಾಮದ ರಸ್ತೆ ಹಾಳಾಗಿರುವುದು
ಬಾಗಲಕೋಟೆ ಜಿಲ್ಲೆಯ ಗೋವನಕೊಪ್ಪ– ಹೆಬ್ಬಳ್ಳಿ ಗ್ರಾಮದ ರಸ್ತೆ ಹಾಳಾಗಿರುವುದು   

ಬಾಗಲಕೋಟೆ: ಅತಿವೃಷ್ಟಿಯಿಂದಾಗಿ ಬೆಳೆಯಷ್ಟೇ ಅಲ್ಲ; ರಸ್ತೆ, ಸೇತುವೆ, ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳು, ವಿದ್ಯುತ್ ಕಂಬಗಳು, ಮನೆಗಳು ಧರೆಗುರುಳಿವೆ.

ಮನೆಗಳು ಧರೆಗುರುಳಿರುವುದರಿಂದ ಜಿಲ್ಲೆಯ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಕೆಲವರು ಬಿದ್ದ ಮನೆಯೊಂದರ ಮೂಲೆಯಲ್ಲಿಯೇ ಇದ್ದರೆ, ಇನ್ನೂ ಕೆಲವರು ಬಾಡಿಗೆ ಮನೆಗಳ ಮೊರೆ ಹೋಗಿದ್ದಾರೆ.

ಈ ವರ್ಷ ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಾಡಿಕೆ ಪ್ರಕಾರ 34.5 ಸೆ.ಮೀ. ನಷ್ಟು ಮಳೆಯಾಗಬೇಕಿತ್ತು. ವಾಸ್ತವಾಗಿ 61.1 ಸೆ.ಮೀ. ನಷ್ಟು ಮಳೆಯಾಗಿದ್ದು, ಶೇ 77ರಷ್ಟು ಹೆಚ್ಚಾಗಿದೆ.

ADVERTISEMENT

43,318 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಉದ್ದು, ಸೂರ್ಯಕಾಂತಿ, ಹೆಸರು, ಸೋಯಾಬಿನ್‌, ಶೇಂಗಾ, ಸಜ್ಜಿ, ಮೆಕ್ಕೆಜೋಳ ಬೆಳೆಗಳು, ತೋಟಗಾರಿಕೆಯ 3,856 ಹೆಕ್ಟೆರ್ ಬೆಳೆ ಹಾಳಾಗಿದೆ.

ಲೋಕೋಪಯೋಗಿ ಇಲಾಖೆಯ 61 ಕಿ.ಮೀ. ರಾಜ್ಯ ಹೆದ್ದಾರಿ, 16 ಸೇತುವೆಗಳು ಹಾಗೂ ಎಂಟು ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಸೇರಿದ 573 ಕಿ.ಮೀ. ರಸ್ತೆ ಹಾಗೂ ಐದು ಸೇತುವೆಗಳು ಹಾಳಾಗಿವೆ.

ಗ್ರಾಮೀಣ ಭಾಗದ ರಸ್ತೆಗಳು ಡಾಂಬರ ಸಮೇತ ಕಿತ್ತು ಹೋಗಿರುವುದರಿಂದ ಜನರು ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ಎದುರಾಗಿದೆ. ಎಷ್ಟೋ ಗ್ರಾಮಗಳ ರಸ್ತೆಗಳು ಸಂಚರಿಸಲು ಯೋಗ್ಯವಿಲ್ಲದಂತಾಗಿವೆ.

ಶಿಕ್ಷಣ ಇಲಾಖೆಗೆ ಸೇರಿದ 46 ಶಾಲೆಗಳ 115 ಕೊಠಡಿಗಳು, ಅಂಗನವಾಡಿಯ 206 ಕೊಠಡಿಗಳು ಹಾನಿಗೊಳಗಾಗಿವೆ. ಮೊದಲೇ ಕೊಠಡಿಗಳ ಕೊರತೆಯಿಂದ ಬಳಲುತ್ತಿದ್ದ ಶಾಲೆಗಳಿಗೆ ಇದರಿಂದ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.

ಅತಿಯಾದ ಮಳೆ ಹಾಗೂ ಪ್ರವಾಹ ಸಂದರ್ಭದಲ್ಲಿ ಹಲವಾರು ಶಾಲಾ ಕಟ್ಟಡಗಳು ಜಲವಾವೃತವಾಗಿದ್ದವು. ಬೇರೆ ಕಡೆಗಳಲ್ಲಿ ತರಗತಿಗಳನ್ನು ನಡೆಸಬೇಕಾದ ಸ್ಥಿತಿ ಎದುರಾಗಿತ್ತು.

ಹೆಸ್ಕಾಂನ 1,214 ಕಂಬ, 146 ವಿದ್ಯುತ್‌ ಪರಿವರ್ತಕಗಳು ಹಾಗೂ 28 ಕಿ.ಮೀ. ವಿದ್ಯುತ್‌ ಮಾರ್ಗ ಹಾಳಾಗಿದೆ. ಇದರಿಂದಾಗಿ ಹಲವಾರು ಗ್ರಾಮಗಳಲ್ಲಿ ದಿನಗಟ್ಟಲೇ ವಿದ್ಯುತ್ ಇಲ್ಲದೆ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಜಿಲ್ಲೆಯಲ್ಲಿ 831 ಮನೆಗಳು ಕುಸಿದಿವೆ. ನಿತ್ಯವೂ ಮನೆಗಳು ಕುಸಿಯುತ್ತಿರುವುದು ವರದಿಯಾಗುತ್ತಲೇ ಇದೆ. ಪ್ರವಾಹದಿಂದಾಗಿ ಜಿಲ್ಲೆಯ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಮನೆಗಳಲ್ಲಿದ್ದ ಹಲವಾರು ಸಾಮಗ್ರಿಗಳು ಹಾನಿಗೆ ಒಳಗಾಗಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಿಂದ ಇಲಾಖಾವಾರು ಹಾನಿ ವಿವರ
ಇಲಾಖೆ; ಮೊತ್ತ (₹ಕೋಟಿಗಳಲ್ಲಿ)

ಕೃಷಿ;311.75

ತೋಟಗಾರಿಕೆ;52.74

ಲೋಕೋಪಯೋಗಿ;142.52ನಗರ

ಪಂಚಾಯತ್ ರಾಜ್‌;24.88

ಶಿಕ್ಷಣ;4.09

ಅಂಗನವಾಡಿ;4.77

ಹೆಸ್ಕಾಂ;3.42

ನಗರಾಭಿವೃದ್ಧಿ;7.89

ವಸತಿ;5.04

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.