ಗುಳೇದಗುಡ್ಡ: ತಾಲ್ಲೂಕಿನ ನಾಗರಾಳ ಎಸ್.ಪಿ.ಗ್ರಾಮದ ಸಮೀಪದಲ್ಲಿರುವ ಮಲಪ್ರಭಾ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಬ್ಯಾರೇಜನ ಚಿಕ್ಕ ತಡೆ ಕಂಬಗಳು ( ಗಾಡ್ ಸ್ಟೋನ್) ಹಾಳಾಗಿದ್ದು, ಅದರ ಮೇಲೆ ಬೈಕ್ ಇತರೆ ವಾಹನಗಳು ಸಂಚರಿಸಲು ಭಯ ಪಡುವಂತಾಗಿದೆ. ಆದ್ದರಿಂದ ದುರಸ್ತಿ ಮಾಡಿಸಬೇಕೆಂದು ನಾಗರಾಳ ಎಸ್.ಪಿ ಹಾಗೂ ಚಿಮ್ಮಲಗಿ ಗ್ರಾಮದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬ್ಯಾರೇಜ್ ಮೂಲಕ ಗುಳೇದಗುಡ್ಡದಿಂದ ಚಿಮ್ಮಲಗಿ, ಮಂಗಳಗುಡ್ಡ, ಕಾಟಾಪುರ ಗ್ರಾಮಕ್ಕೆ ಸಂಚರಿಸಲು ಅನುಕೂಲವಾಗುತ್ತದೆ. ಒಂದು ವರ್ಷದಿಂದ ತಡೆಗೋಡೆ ಕಂಬಗಳು ಹಾಳಾಗಿದ್ದು, ಇದುವರೆಗೆ ರಿಪೇರಿ ಮಾಡದೆ ಇರುವುದರಿಂದ ಸಾರ್ವಜನಿಕರು ವಾಹನದ ಮೇಲೆ ತೆರಳಲು ಹಿಂಜರಿಯುತ್ತಿದ್ದಾರೆ.
ಬ್ಯಾರೇಜ್ ಮೂಲಕ ಬೈಕ್ ಅಲ್ಲದೆ ಕಾರು, ಟಾಟಾ ಎಸಿ, ಟಂ.ಟಂಗಳು ಸಂಚರಿಸುತ್ತಿದ್ದು, ಆದಷ್ಟು ಬೇಗನೆ ಲೋಕೋಪಯೋಗಿ ಇಲಾಖೆಯವರು ಗಮನಹರಿಸಿ ದುರಸ್ತಿ ಕಾರ್ಯ ಮಾಡಿಸಬೇಕೆಂದು ನಾಗರಾಳ ಎಸ್.ಪಿ.ಗ್ರಾಮದ ಕೃಷಿಕ ಲೆಂಕೆಪ್ಪ ಹಿರೇಕುರುಬರ ಹೇಳಿದರು.
‘ನಾಗರಾಳ ಬ್ಯಾರೇಜ್ ಸಣ್ಣ ತಡೆಗೋಡೆ ಕಂಬಗಳು ಹಾಳಾಗಿದ್ದು ನನ್ನ ಗಮನಕ್ಕೆ ಬಂದಿದೆ ಕೆಲವೆ ದಿನಗಳಲ್ಲಿ ದುರಸ್ತಿ ಮಾಡಲಾಗುವುದು’ ಎಂದು ಬಾದಾಮಿ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ನಾಯಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.