ADVERTISEMENT

ಕೊಳಚೆ ಗ್ರಾಮವಾದ ನೀಲಾನಗರ

ಓಣಿಗಳ ತುಂಬೆಲ್ಲ ಹರಿಯುವ ರಾಡಿ ನೀರು: ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 5:42 IST
Last Updated 12 ಮಾರ್ಚ್ 2025, 5:42 IST
ಬಾಗಲಕೋಟೆ ತಾಲ್ಲೂಕಿನ ನೀಲಾನಗರದ ಮಾಳಗಿಮನಿ ಓಣಿಯ ರಸ್ತೆಯಲ್ಲಿ ಸಂಗ್ರಹವಾಗಿರುವ ರಾಡಿ ನೀರು
ಬಾಗಲಕೋಟೆ ತಾಲ್ಲೂಕಿನ ನೀಲಾನಗರದ ಮಾಳಗಿಮನಿ ಓಣಿಯ ರಸ್ತೆಯಲ್ಲಿ ಸಂಗ್ರಹವಾಗಿರುವ ರಾಡಿ ನೀರು   

ರಾಂಪುರ: ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆ ತುಂಬ ನೀರು ಹರಿದು ಕೆಸರಾಗಿ ಮಕ್ಕಳು ತಿರುಗಾಡಲು ಆಗದ ಸ್ಥಿತಿಯಲ್ಲಿರುವ ಪುಟ್ಟ ಗ್ರಾಮ ನೀಲಾನಗರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಬಾಗಲಕೋಟೆ ತಾಲ್ಲೂಕಿನ ನೀಲಾನಗರವನ್ನು ಶಿರೂರ ಪಟ್ಟಣ ಪಂಚಾಯಿತಿಗೆ ಸೇರ್ಪಡೆ ಮಾಡಿದ್ದನ್ನು ವಿರೋಧಿಸಿರುವ ಗ್ರಾಮಸ್ಥರು, ತಮಗೆ ಗ್ರಾಮ ಪಂಚಾಯತಿ ವ್ಯವಸ್ಥೆಯೇ ಇರಲಿ ಎಂದು ಹೋರಾಟ ನಡೆಸಿದ್ದಾರೆ. ಹೀಗಾಗಿ ಈಗ ಈ ಗ್ರಾಮ ಅತಂತ್ರ ಸ್ಥಿತಿಯಲ್ಲಿದೆ.

ಶಿರೂರ ಪಟ್ಟಣ ಪಂಚಾಯಿತಿಯೇ ಗ್ರಾಮದ ವ್ಯವಸ್ಥೆ ನೋಡುತ್ತಿದೆ. ಆದರೆ ಕಳೆದ 3–4 ತಿಂಗಳಿಂದ ಗ್ರಾಮದಲ್ಲಿ ನೈರ್ಮಲ್ಯ ಸಂಪೂರ್ಣ ಹಾಳಾಗಿದ್ದು, ಸ್ವಚ್ಛತೆಯಿಲ್ಲದೇ ಜನ ಪರಿತಪಿಸುವಂತಾಗಿದೆ. ಪಟ್ಟಣ ಪಂಚಾಯಿತಿಯವರು ಗ್ರಾಮದತ್ತ ಸುಳಿಯುತ್ತಿಲ್ಲ ಎಂಬ ದೂರು ಜನರಿಂದ ಕೇಳಿಬರುತ್ತಿದೆ. ಜನರ ಈ ದೂರಿಗೆ ಅಲ್ಲಿನ ಅವ್ಯವಸ್ಥೆ ಕೈಗನ್ನಡಿಯಾಗಿದೆ.

ADVERTISEMENT

ಯಾವ ಓಣಿಗೆ ಹೋದರೂ ಕಸದ ರಾಶಿ, ಕೆಸರುಮಯ ಸನ್ನಿವೇಶ ಕಾಣುತ್ತದೆ. ಚರಂಡಿ ವ್ಯವಸ್ಥೆಯಿಲ್ಲದೇ ನೀರು ರಸ್ತೆಯಲ್ಲೇ ಹರಿದು ರಸ್ತೆ ತುಂಬೆಲ್ಲ ಕೆಸರು ತುಂಬಿಕೊಂಡಿದೆ. ಇದರಿಂದ ಜನ ತಿರುಗಾಡಲು ಬೇರೆ ದಾರಿ ಹುಡುಕುವ ಸ್ಥಿತಿಯಿದೆ. ಮಕ್ಕಳು ರಾಡಿಯಲ್ಲೇ ತಿರುಗಾಡುವಂತಾಗಿದೆ. ರಾಡಿಯಲ್ಲಿ ಹಂದಿಗಳ ಹಿಂಡು ವಾಸ್ತವ್ಯ ಹೂಡಿದ್ದು, ರಾತ್ರಿ ಸೊಳ್ಳೆಗಳ ಕಾಟ, ವಾಸನೆ ಜನರ ಜೀವ ಹಿಂಡುತ್ತಿದೆ.

ಸರಿಯಾದ ಸಿ.ಸಿ ರಸ್ತೆಗಳಿಲ್ಲ. ಓಣಿಗಳಲ್ಲಿ ಸಂಗ್ರಹವಾಗಿರುವ ಕಸದ ರಾಶಿ, ರಾಡಿಯಲ್ಲಿ ಹಾವು, ಚೇಳುಗಳು ಕಾಣಿಸಿಕೊಳ್ಳುತ್ತಿವೆ ಎಂದು ಮಾಳಗಿಮನಿ ಓಣಿಯ ನಿವಾಸಿಗಳು ದೂರುತ್ತಿದ್ದಾರೆ.

‘ಕಳೆದ ಎರಡು ತಿಂಗಳಿಂದ ಪಟ್ಟಣ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿ ಇತ್ತ ಸುಳಿದಿಲ್ಲ. ನಿದ್ರೆ ಮಾಡುವುದು ಸಹ ಕಷ್ಟವಾಗಿದೆ’ ಎನ್ನುತ್ತಾರೆ ದೇಸಾಯಿ ಲಮಾಣಿ.

ರಾತ್ರಿ ಸೊಳ್ಳೆಗಳ ಕಾಟದಿಂದಾಗಿ ಅಭ್ಯಾಸಕ್ಕೂ ತೊಂದರೆಯಾಗಿದೆ ಎಂದು ಬಿಎ ವಿದ್ಯಾರ್ಥಿನಿ ಜ್ಯೋತಿ ಮಾಳಗಿಮನಿ ಹೇಳುತ್ತಾರೆ.

ಇದು ಒಂದು ಓಣಿಯ ಸಮಸ್ಯೆಯಲ್ಲ. ಇಡೀ ನೀಲಾನಗರದ ಪ್ರತಿ ಓಣಿಯಲ್ಲೂ ಇದೇ ಸ್ಥಿತಿಯಿದೆ. ರಸ್ತೆಗಳೆಲ್ಲ ಕೆಸರುಮಯವಾಗಿ ಅಡ್ಡಾಡುವುದು ದುಸ್ತರವಾಗಿದೆ. ಗ್ರಾಮದಲ್ಲಿ ಎಲ್ಲವೂ ಇದೆ, ಆದರೆ ಸ್ವಚ್ಛತೆ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ.

ಗ್ರಾ.ಪಂ. ವ್ಯವಸ್ಥೆ ಬೇಕು: ಗ್ರಾಮದ ಹಿರಿಯರಿಂದ ಹಿಡಿದು ಯುವಕರ ವರೆಗೆ ಬಹುತೇಕರು ತಮಗೆ ಪಟ್ಟಣ ಪಂಚಾಯಿತಿ ವ್ಯವಸ್ಥೆ ಬೇಡ, ಗ್ರಾಮ ಪಂಚಾಯಿತಿ ವ್ಯವಸ್ಥೆಯೇ ಇರಲಿ ಎನ್ನುತ್ತಿದ್ದಾರೆ. ಇದಕ್ಕಾಗಿ ಇಲ್ಲಿನ ಜನ ನ್ಯಾಯಾಲಯದ ಮೆಟ್ಟಿಲು ಸಹ ಹತ್ತಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ನೀಲಾನಗರದ ಮಾಳಗಿಮನಿ ಓಣಿಯ ರಸ್ತೆಯಲ್ಲಿ ಸಂಗ್ರಹವಾಗಿರುವ ರಾಡಿ ನೀರು
ಬಾಗಲಕೋಟೆ ತಾಲ್ಲೂಕಿನ ನೀಲಾನಗರದ ನೀರಿನ ತೊಟ್ಟಿಗಳ ಬಳಿ ರಸ್ತೆಯಲ್ಲಿ ಹರಿಯುತ್ತಿರುವ ನೀರು
ಗ್ರಾಮ ಪಂಚಾಯಿತಿ ವ್ಯವಸ್ಥೆ ಇದ್ದರೆ ನಮ್ಮ ಸಮಸ್ಯೆಯನ್ನು ಸ್ಥಳೀಯವಾಗಿ ಹೇಳಿಕೊಳ್ಳಲು ಅನುಕೂಲ. ಶಾಲೆ ಕಲಿತ ನಮ್ಮ ಮಕ್ಕಳಿಗೂ ಗ್ರಾಮೀಣ ಕೃಪಾಂಕದ ಸವಲತ್ತು ಸಿಗುತ್ತದೆ
ರಂಗನಾಥ ಕುರಿಗಾರ ಪಾಂಡಪ್ಪ ಕಟ್ಟಿಮನಿ ಗ್ರಾಮದ ನಿವಾಸಿಗಳು
ಪಟ್ಟಣ ಪಂಚಾಯಿತಿಯವರು ಸ್ವಚ್ಛತೆ ಮಾಡುವುದಿಲ್ಲ. ಊರ ತುಂಬೆಲ್ಲ ನೀರು ಹರಿದು ಕೆಸರಾಗಿ ಸೊಳ್ಳೆ ಕಾಟ ಹೆಚ್ಚಾಗಿದೆ. ಇದನ್ನು ಕೇಳಲು ಶಿರೂರಿಗೆ ಹೋಗಬೇಕಾಗಿದೆ
ಲೋಕನಾಥ ದೊಡಮನಿ ಗ್ರಾಮದ ನಿವಾಸಿ
ನೀಲಾನಗರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತೇನೆ. ಗ್ರಾಮಕ್ಕೆ ಮತ್ತೆ ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಆದೇಶ ಆಗಿದೆ. ಪ್ರಾರಂಭವಾಗುವ ವರೆಗೆ ನಾವೇ ಉಸ್ತುವಾರಿ ಮಾಡುತ್ತೇವೆ
ಶಿವಾನಂದ ಆಲೂರ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಶಿರೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.