ADVERTISEMENT

ಬಾಗಲಕೋಟೆ: ನೆರವು ಕೊಡಿಸುವ ನೆಪದಲ್ಲಿ ₹2 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:10 IST
Last Updated 20 ನವೆಂಬರ್ 2025, 4:10 IST
   

ಬಾಗಲಕೋಟೆ: ಬೇರೆ ಕಂಪನಿಗಳಿಂದ ದೇಣಿಗೆ ಕೊಡಿಸುವುದಾಗಿ ಹೇಳಿ, ಎನ್‌ಜಿಒ ಒಂದಕ್ಕೆ ದೇಣಿಗೆಯಾಗಿ ಬಂದಿದ್ದ ₹2 ಕೋಟಿ ಮೊತ್ತವನ್ನು ಲಪಟಾಯಿಸಿದ ಪ್ರಕರಣ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.

ಜಮಖಂಡಿಯಲ್ಲಿ ಜಯ ಭಾರತ ಮಾತೆ ಎಂಬ ಎನ್‌ಜಿಒ ಇದೆ. ಸಂಸ್ಥೆ ವತಿಯಿಂದ ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧೆಡೆ ವೃದ್ಧಾಶ್ರಮ, ನಿರ್ಗತಿಕ ವಸತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ವಿವಿಧ ಕಂಪನಿಗಳ ಸಿಎಸ್‌ಆರ್ ನೆರವು ಪಡೆಯಲು ಆನ್‌ಲೈನ್‌ನಲ್ಲಿ ಸಂಪರ್ಕ ಮಾಡಲಾಗುತ್ತಿತ್ತು.

ಆನ್‌ಲೈನ್‌ ಮೂಲಕ ಈ ವಿಷಯ ತಿಳಿದುಕೊಂಡ ಆಸ್ಸಾಂ ರಾಜ್ಯದವರು ಎಂದು ಹೇಳಿಕೊಳ್ಳಲಾದ ಸುರ್ಜಿತ್ ಸರ್ಕಾರ, ಸಿದ್ದಾರ್ಥ ಸರ್ಕಾರ, ಪಶ್ಚಿಮ ಬಂಗಾಳದರೆಂದು ಹೇಳಿದ ಮಾನಷ್‌ ಘೋಷ, ಎನ್‌ಜಿಒದ ಶಶಾಂಕಕುಮಾರ ಎಂಬುವವರನ್ನು ಸಂಪರ್ಕಿಸಿದ್ದಾರೆ.

ADVERTISEMENT

ಜಮಖಂಡಿಗೆ ಬಂದು ವಾರಗಟ್ಟಲೇ ಇಲ್ಲಿದ್ದ ಅವರು, ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ್ದಾರೆ. ಯಾವ ಉದ್ದೇಶಕ್ಕೆ ನೆರವು ಬೇಕು ಎನ್ನುವುದರ ಜತೆಗೆ ಬ್ಯಾಂಕ್‌, ಕೆವೈಸಿ ಹೆಸರಿನಲ್ಲಿ ಮೊಬೈಲ್‌ ವಿವರ ಎಲ್ಲವನ್ನೂ ಪಡೆದುಕೊಂಡಿದ್ದಾರೆ.

ಸಂಸ್ಥೆಯ ಹೆಸರಿನಲ್ಲಿದ್ದ ಎಸ್‌ಬಿಐ ಖಾತೆ ವಿವರ ಪಡೆದುಕೊಂಡು, ಆ ಖಾತೆಗೆ ನೆರವು ನೀಡಬೇಕು ಎಂದು ಕ್ಯೂ ಆರ್‌ ಕೋಡ್ ಅನ್ನು ಎಲ್ಲರಿಗೆ ಕಳುಹಿಸಿದ್ದಾರೆ. ಅದಕ್ಕೆ ಸಣ್ಣ, ಸಣ್ಣ ಮೊತ್ತವನ್ನು ಜನರು ನೀಡಿದ್ದು, ಆ ಮೊತ್ತವೇ ₹2 ಕೋಟಿಯಾಗಿದೆ.

ಎನ್‌ಜಿಎದವರ ಮೊಬೈಲ್‌ಗೆ ಸಂದೇಶ ಬಾರದಂತೆ ಮಾಡಿದ್ದರಿಂದ ಹಣ ಜಮಾ ಆಗಿರುವುದು ಇವರಿಗೆ ಗೊತ್ತಾಗಿಲ್ಲ. ಎರಡು ದಿನಗಳಲ್ಲಿ ಜಮಾ ಆದ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ಸಂಪರ್ಕಕ್ಕೆ ಸಿಗದಂತೆ ಪರಾರಿಯಾಗಿದ್ದಾರೆ.

ಮೋಸ ಮಾಡಿದ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.