ಗುಳೇದಗುಡ್ಡ: ‘ಶಾಂತಿ ಮನುಷ್ಯನಿಗೆ ಗಗನಕುಸುಮವಾಗಿದೆ. ನಾವು ದೊಡ್ಡವರೆಂದುಕೊಂಡರೆ ಅನುಭವಿಸಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿ ನಾವು ಸಣ್ಣ ಹುಳುವಾದರೆ ಅರಿವಿನ ಪ್ರಜ್ಞೆ ಬರುತ್ತದೆ’ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಶ್ರೀಗಳು ಹೇಳಿದರು.
ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆ ಅಂಗವಾಗಿ ಏರ್ಪಡಿಸಿರುವ ಮಾಸಿಕ ಪ್ರವಚನದ ಎರಡನೇ ದಿನವಾದ ಶನಿವಾರ ಪ್ರವಚನ ನೀಡಿದ ಅವರು, ‘ಮನುಷ್ಯನ ಜೀವನ ಅನ್ನುವುದು ಹಾಡಲ್ಲ, ಅದು ನೃತ್ಯವಾಗಬೇಕು. ಮನುಷ್ಯ ಪ್ರತಿದಿನ ಜೀವನ ಅನುಭವಿಸಬೇಕು. ಅಂದಾಗ ಮಾತ್ರ ಮನುಷ್ಯ ಪರಿಪೂರ್ಣನಾಗುತ್ತಾನೆ’ ಎಂದರು,
‘ಅರಿವಿನ ಪ್ರಜ್ಞೆ ಬೇಕು. ಅಂತಸ್ತು, ಐಶ್ವರ್ಯ, ಹೆಣ್ಣು, ಹೊನ್ನು ,ಮಣ್ಣು ಎಲ್ಲವೂ ತನ್ನದಾಗಬೇಕೆಂದು ಮನುಷ್ಯ ಬಯಸುತ್ತಾನೆ ಎಂದ ಅವರು, ಹೆಣ್ಣಿಗಾಗಿ ಸತ್ತವರು ಕೋಟಿ, ಹೊನ್ನಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ಸತ್ತವರು ಕೋಟಿ, ನಿಮಗಾಗಿ ಸತ್ತವರನು ಕಾಣೆ ಗುಹೇಶ್ವರ ಎಂದು ಹೇಳಿದರು. ಜನರಲ್ಲಿರುವ ಇಂತಹ ಅಂಧಕಾರ ಹೋಗಲಾಡಿಸಲು ಶರಣರು, ಮಹಾತ್ಮರು ಮಾಡಿದ ಕಾರ್ಯ ಅನಂತವಾಗಿದೆ’ ಎಂದರು.
’ಜೀವನ ರಂಜನೆಯಲ್ಲ, ಶಿವರಂಜನೆ. ನನ್ನನ್ನು ಚೆನ್ನಾಗಿಡು ದೇವರೇ ಎನ್ನುವವರೇ ಇಂದು ಹೆಚ್ಚಾಗಿದ್ದಾರೆ. ಗಳಿಸೋದೆ ಜೀವನ ಆಗಿದೆ. ಮಗನಿಗೆ,ಮೊಮ್ಮಗನಿಗೆ.. ಹೀಗೆ ಪಟ್ಟಿ ಸಾಗುತ್ತದೆ. ಶಿಕ್ಷಣ ಪಡೆದವರು ಭ್ರಷ್ಟಾಚಾರಿಗಳಾಗಿದ್ದಾರೆ. ಮನುಷ್ಯ ಮೋಸ, ವಂಚನೆ ಮಾಡುತ್ತಾನೆ. ಮನುಷ್ಯನರಲ್ಲಿ ಮನುಷ್ಯತ್ವ ಬರುವ ಹಾಗೆ ಸಂತರು, ಶರಣರು ಮಾಡುತ್ತಾರೆ. ಮಕ್ಕಳಿಗೆ ಆಸ್ತಿ ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.