ADVERTISEMENT

ಬಾದಾಮಿ: ಮೂಲಸೌಕರ್ಯ ವಂಚಿತರಾದ ಖ್ಯಾಡ ಗ್ರಾಮದ ಜನರು

ಎಸ್.ಎಂ ಹಿರೇಮಠ
Published 19 ಮಾರ್ಚ್ 2025, 5:24 IST
Last Updated 19 ಮಾರ್ಚ್ 2025, 5:24 IST
<div class="paragraphs"><p>ಬಾದಾಮಿ ಸಮೀಪದ ಮಲಪ್ರಭಾ ನದಿ ದಂಡೆಯ ಖ್ಯಾಡ ಗ್ರಾಮದ ಆಸರೆ ಬಡಾವಣೆಯಲ್ಲಿ ಹದಗೆಟ್ಟ ರಸ್ತೆ, ಬಿಸಿಲಿನಲ್ಲಿ ಜಾನುವಾರುಗಳು.</p><p><br></p></div>

ಬಾದಾಮಿ ಸಮೀಪದ ಮಲಪ್ರಭಾ ನದಿ ದಂಡೆಯ ಖ್ಯಾಡ ಗ್ರಾಮದ ಆಸರೆ ಬಡಾವಣೆಯಲ್ಲಿ ಹದಗೆಟ್ಟ ರಸ್ತೆ, ಬಿಸಿಲಿನಲ್ಲಿ ಜಾನುವಾರುಗಳು.


   

ಬಾದಾಮಿ: ಮಲಪ್ರಭಾ ನದಿ ದಂಡೆಯಲ್ಲಿರುವ ಖ್ಯಾಡ ಗ್ರಾಮದ ಆಸರೆ ಬಡಾವಣೆಯಲ್ಲಿ ಗುಂಡಿಗಳ ರಸ್ತೆ, ಹೂಳು ತುಂಬಿದ ಚರಂಡಿ, ಕುಡಿಯುವ ನೀರಿನ ಕೊರತೆ, ಶಾಲಾ ಕಟ್ಟಡ ಬೇಡಿಕೆ, ದನದ ಕೊಟ್ಟಿಗೆ ಕೊರತೆ, ಬಯಲು ಶೌಚಾಲಯ, ಮುಳ್ಳುಕಂಟಿಗಳು ಮತ್ತು ಅಶುಚಿತ್ವದಿಂದಾಗಿ ಇಡೀ ಬಡಾವಣೆ ಸಮಸ್ಯೆಗಳ ಸುಳಿಗೆ ಸಿಲುಕಿದೆ.

ADVERTISEMENT

2009 ಮತ್ತು 2010ರಲ್ಲಿ ಮಲಪ್ರಭಾ ನದಿ ಪ್ರವಾಹ ಬಂದಾಗ ಗ್ರಾಮವು ಜಲಾವೃತವಾಗಿತ್ತು. ಅಂದಿನ ಸರ್ಕಾರ ಮತ್ತು ದಾನಿಗಳ ನೆರವಿನಿಂದ ರೈತರಿಂದ ಹೊಲವನ್ನು ಖರೀದಿಸಿ ಖ್ಯಾಡ ಗ್ರಾಮದ ಹೊರಗೆ ಹೊಸದಾಗಿ ಅಂದಾಜು 600ಕ್ಕೂ ಅಧಿಕ ಆಸರೆ ಮನೆಗಳನ್ನು ನಿರ್ಮಿಸಲಾಗಿದೆ. 500 ಮನೆಗಳಲ್ಲಿ ಕುಟುಂಬಗಳು ವಾಸವಾಗಿದ್ದಾರೆ.

2019ರಲ್ಲಿ ಮತ್ತೆ ಪ್ರವಾಹ ಬಂದಾಗ ಅನಿವಾರ್ಯವಾಗಿ ಸಂತ್ರಸ್ತರು ಸ್ಥಳಾಂತರಗೊಂಡರು. ಹೊಸದಾಗಿ ನಿರ್ಮಿಸಿದ ಮನೆಗಳು ಕೆಲವು ಶಿಥಿಲಗೊಂಡಿದ್ದವು. ಫಲಾನುಭವಿಗಳೇ ದುರಸ್ತಿ ಮಾಡಿಕೊಂಡಿದ್ದಾರೆ. ಈಗ ಮತ್ತೆ ಕೆಲವು ಮನೆಗಳಲ್ಲಿ ಜನರು ವಾಸವಿರದೆ, ಶಿಥಿಲಾವಸ್ಥೆಗೆ ತಲುಪಿದೆ.

ಇಡೀ ಆಸರೆ ಬಡಾವಣೆಗಳಲ್ಲಿ ಅಂದಾಜು ನೂರು ಅಡಿ ಮಾತ್ರ ಸಿ.ಸಿ ರಸ್ತೆ ನಿರ್ಮಿಸಿದ್ದಾರೆ. ಉಳಿದ ಕಡೆಗಳಲ್ಲಿ ರಸ್ತೆಯನ್ನೇ ನಿರ್ಮಿಸಿಲ್ಲ. ಗುಂಡಿಗಳಿಂದ ತುಂಬಿವೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಸಂಚರಿಸಲು ಬಾರದಂತಾಗಿದೆ.

ರಸ್ತೆ ಪಕ್ಕದಲ್ಲಿ ಕೆಲವೆಡೆ ಚರಂಡಿ ನಿರ್ಮಿಸಿದ್ದಾರೆ. ಚರಂಡಿಗಳನ್ನು ಸ್ವಚ್ಛ ಮಾಡದ್ದರಿಂದ ಇದ್ದೂ ಇಲ್ಲದಂತಾಗಿವೆ. ಕೆಲವೆಡೆ ಚರಂಡಿ ನಿರ್ಮಿಸಿಲ್ಲ.

‘ಇಲ್ಲಿಗೆ ಬಂದು ಆರು ವರ್ಷ ಗಳಾದವು, ಒಂದು ಬಾರಿಯೂ ಚರಂಡಿ ಸ್ವಚ್ಛತೆ ಮಾಡಿಲ್ಲ. ನೀರಿನ ಟಾಕಿ ತೊಳದಿಲ್ಲ. ಸೊಳ್ಳೆಗಳ ಕಾಟ ವಿಪರೀತವಾಗಿ. ರಸ್ತಾ ಎಲ್ಲಾ ಹದಗೆಟ್ಟಾವು. ಮಳಿಗಾಲದಾಗ ಅಡ್ಡಾಡೂದು ಬಹಳ ತ್ರಾಸ ಆಗೈತ್ರಿ’ ಎಂದು ಬಡಾವಣೆ ನಿವಾಸಿ ವೃದ್ಧೆ ಶಂಕ್ರಮ್ಮ ‘ಪ್ರಜಾವಾಣಿ’ ಎದುರು ಅಲವತ್ತುಕೊಂಡರು.

‘ಆಸರೆ ಬಡಾವಣೆಯಲ್ಲಿ ಬಹುತೇಕ ರೈತರು ತಮ್ಮ ಜಾನುವಾರುಗಳನ್ನು ಬಿಸಿಲಿನಲ್ಲಿಯೇ ಕಟ್ಟಿದ್ದರು. ದನದ ಕೊಟ್ಟಿಗೆ ನಿರ್ಮಿಸಲು ಗ್ರಾಮ ಪಂಚಾಯಿತಿಯಿಂದ ಎನ್ಆರ್‌ಜಿಯಲ್ಲಿ ರೈತರಿಗೆ ಅನುದಾನ ಕೊಡಬೇಕು’ ಎಂದು ರೈತ ಪರಸಪ್ಪ ಖಾನಗೌಡ ಆಗ್ರಹಿಸಿದರು.

‘ಇಲೆಕ್ಷನ್‌ ಇದ್ದಾಗ ಬರತಾರ ಓಟ ಹಾಕಿರಿ ಎಂದು ಕೈಮುಗದ ಹೊಕ್ಕಾರ. ಆಯ್ಕೆಯಾದ ಮ್ಯಾಲೆ ನಮ್ಮ ಕಡೆ ಹೊಳ್ಳಿ ನೋಡಾಂಗಿಲ್ಲ’ ಎಂದು ನಿವಾಸಿಗಳು ಜನಪ್ರತಿನಿಧಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

‘ಹಳೆ ಊರಾಗ 8ನೇ ತನಕ ಕನ್ನಡ ಶಾಲೆ ಇದೆ. ಇಲ್ಲಿನ ಹುಡುಗೂರ ಶಾಲಿ ಕಲಿಯಾಕ 2 ಕಿ.ಮೀ. ನಡೆದು ಅಲ್ಲಿಗೆ ಹೋಗಬೇಕು, ಇಲ್ಲಿಯೇ ಶಾಲೆ ಕಟ್ಟಡ ಆಗಬೇಕು’ ಎಂದು ಪೋಷಕರು ಒತ್ತಾಯಿಸಿದರು.

‘ಚೊಳಚಗುಡ್ಡ ಗ್ರಾಮದಿಂದ ನಮ್ಮೂರಿಗೆ ಕುಡಿಯುವ ನೀರು ಬರಬೇಕು. ಜಲಜೀವನ ಮಿಷನ್ ಯೋಜನೆಯಲ್ಲಿ ಹಾಕಿದ ನಳಗಳಿಗೆ ಸರಿಯಾಗಿ ನೀರು ಬರೂದಿಲ್ಲ. ನಮ್ಮೂರಲ್ಲಿಯೇ ಕೊಳವೆ ಬಾವಿ ಹಾಕಿಸಬೇಕಿತ್ತು. ರಸ್ತೆ, ಚರಂಡಿ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಕ್ರಿಯಾಯೋಜನೆ ಕಳಿಸಿ ಒಂದೂವರೆ ವರ್ಷವಾಗಿದೆ. ಇದೂವರೆಗೆ ಅನುಮೋದನೆ ಸಿಕ್ಕಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪರಶುರಾಮ ಹಟಗಾರ ಹೇಳಿದರು.

‘ಎನ್.ಆರ್.ಜಿ ಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಕಳಿಸಲಾಗಿದೆ. ಅನುಮೋದನೆ ಹಂತದಲ್ಲಿದೆ. ಸುಲಭ ಶೌಚಾಲಯ ಮತ್ತು ದನದ ಕೊಟ್ಟಿಗೆ ನಿರ್ಮಿಸಲು ಕುಟುಂಬದ ಸದಸ್ಯರು ಗ್ರಾಮ ಪಂಚಾಯಿತಿಗೆ ಅರ್ಜಿ ಕೊಡಬೇಕು’ ಎಂದು ಚೊಳಚಗುಡ್ಡ ಪಿಡಿಒ ರಮೇಶ ಚನ್ನಾನಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.