ADVERTISEMENT

ಗುಳೇದಗುಡ್ಡ | ನನಸಾಗದ ಸ್ವಂತ ಕಟ್ಟಡದ ಕನಸು

ಹಳದೂರ ಪ್ರೌಢಶಾಲೆ: ಎರಡೂವರೆ ಎಕರೆ ಜಾಗ ನೀಡಿದರೂ ಅಡ್ಡಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 6:33 IST
Last Updated 30 ಮಾರ್ಚ್ 2024, 6:33 IST
ಗುಳೇದಗುಡ್ಡ ತಾಲ್ಲೂಕಿನ ಹಳದೂರ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಜಮೀನಿನಲ್ಲಿ ಗಿಡ ಗಂಟಿ ಬೆಳೆದಿದೆ
ಗುಳೇದಗುಡ್ಡ ತಾಲ್ಲೂಕಿನ ಹಳದೂರ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಜಮೀನಿನಲ್ಲಿ ಗಿಡ ಗಂಟಿ ಬೆಳೆದಿದೆ   

ಗುಳೇದಗುಡ್ಡ: ತಾಲ್ಲೂಕಿನ ಹಳದೂರ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿದ್ದರೂ, ಕಟ್ಟಡ ನಿರ್ಮಾಣದ ಕನಸು ನನಸಾಗಿಲ್ಲ.

2014ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಉನ್ನತೀಕರಿಸಿದ ಪ್ರೌಢಶಾಲೆ ಮಂಜೂರಾಗಿದ್ದು, ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೇ ತರಗತಿಗಳು ನಡೆಯುತ್ತಿವೆ. 10 ವರ್ಷ ಕಳೆದರೂ ಸ್ವಂತ ಕಟ್ಟಡ ಇಲ್ಲವಾಗಿದೆ.

ಪ್ರಾಥಮಿಕ ಶಾಲೆಯಲ್ಲಿರುವ 11 ಕೊಠಡಿಗಳ ಪೈಕಿ ಒಂದರಿಂದ ಎಂಟನೇ ತರಗತಿಗಳಿಗೆ ಕೊಠಡಿಗಳು ಸೇರಿದಂತೆ ಒಂದು ಕಾರ್ಯಾಲಯದ ಕೊಠಡಿ ಇದೆ. ಒಂಬತ್ತು ಹಾಗೂ 10ನೇ ತರಗತಿಗೆ ಎರಡು ಕೊಠಡಿಗಳು, ಕಚೇರಿಗಾಗಿ ಒಂದು ಕೊಠಡಿಯನ್ನು ಪ್ರೌಢಶಾಲೆಗೆ ನೀಡಲಾಗಿದೆ. ಕೊಠಡಿಗಳ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಕಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಪಾಲಕ ಆರೋಪ.

ADVERTISEMENT

ಗುಳೇದಗುಡ್ಡ–ಕಮತಗಿ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಎರಡೂವರೆ ಎಕರೆ ಸರ್ಕಾರಿ ಜಾಗವನ್ನು ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕಾಗಿ ನೀಡಲಾಗಿದೆ. ಹೊಸ ಕಟ್ಟಡ ನಿರ್ಮಿಸಿದರೆ ಹಳದೂರು, ಅಲ್ಲೂರು, ಇಂಜಿನವಾರಿ, ಬುದಿನಗಡ ಹಾಗೂ ಪಾದನಕಟ್ಟಿ ಗ್ರಾಮದ ವಿದ್ಯಾರ್ಥಿಗಳು, ಇಲ್ಲಿಗೆ ಪ್ರವೇಶಾತಿ ಪಡೆಯಲು ಅನುಕೂಲವಾಗುತ್ತದೆ.

ಸಮವಿಲ್ಲದ ಜಾಗ: ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಜಾಗ ಸಮತಟ್ಟಾಗಿಲ್ಲ. ಅದನ್ನು ಸಮಗೊಳಿಸಲು ಹೆಚ್ಚು ಹಣ ಬೇಕಿದೆ. ಹೀಗಾಗಿ ಹೊಸ ಕಟ್ಟಡ ಕಟ್ಟಲು ಹಿಂದೇಟು ಹಾಕಲಾಗುತ್ತಿದೆ ಎಂಬುದು ಹಲವರ ಮಾಹಿತಿ.

ಅತಿಕ್ರಮಣ: ಈ ಜಾಗ ಗ್ರಾಮದಿಂದ 1 ಕಿ.ಮೀ. ದೂರವಿದೆ. ಸುತ್ತಲೂ ಕೃಷಿ ಜಮೀನು ಇರುವುದರಿಂದ ಕೆಲವರು ಸ್ವಲ್ಪ ಜಾಗ ಆತಿಕ್ರಮಿಸಿಕೊಂಡರೆ, ಇನ್ನೂ ಕೆಲವರು ಅಲ್ಲಿರುವ ಮಣ್ಣನ್ನು ತೆಗೆದುಕೊಂಡು ಹೋಗಿದ್ದು, ತಗ್ಗು–ಗುಂಡಿಗಳಿಂದ ಕೂಡಿದೆ.

ಗುಳೇದಗುಡ್ಡ ತಾಲ್ಲೂಕಿನ ಹಳದೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಪ್ರೌಢಶಾಲೆ

ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ನೀಡಿದ ಜಾಗ ದೂರದಲ್ಲಿದೆ. ಗ್ರಾಮದಲ್ಲೇ ಜಮೀನು ಖರೀದಿಸಿ ನೀಡಲು ಪ್ರಯತ್ನ ಮಾಡುತ್ತಿದ್ದೇವೆ ಎ.ಎಂ.ಮಡಿವಾಳರ ನಿವೃತ್ತ ಶಿಕ್ಷಣಾಧಿಕಾರಿ ಹಳದೂರ

ಕಟ್ಟಡ ನಿರ್ಮಾಣಕ್ಕಾಗಿ ಹಲವು ಇಲಾಖೆಗಳಿಗೆ ಮನವಿ ನೀಡಲಾಗಿದೆ. ಆದರೆ ಏನು ಪ್ರಯೋಜನವಾಗಿಲ್ಲ ಎಸ್.ಎಸ್. ಪಂಚಾಕ್ಷರಿಮಠ ಮುಖ್ಯ ಶಿಕ್ಷಕ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ

ತಾಂತ್ರಿಕ ತೊಂದರೆ ಕುರಿತು ಗ್ರಾಮಸ್ಥರ ಜೊತೆ ಚರ್ಚಿಸಿ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು. ಕಟ್ಟಡ ನಿರ್ಮಾಣ ಯತ್ನ ಮಾಡಲಾಗುವುದು ಎನ್.ವೈ. ಕುಂದರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಾದಾಮಿ

ತಾಂತ್ರಿಕ ತೊಂದರೆ ಸರ್ವೇ ನಂಬರ್‌ 113/ಬ ಜಮೀನಿನ ಉತಾರದಲ್ಲಿ ವಿಸ್ತೀರ್ಣ ಕಾಲಂನಲ್ಲಿ 00 ಎಂದು ನಮೂದಾಗಿದೆ. ಅಲ್ಲದೆ ಉತಾರ ಗುಳೇದಗುಡ್ಡ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ  ಹೆಸರಿನಲ್ಲಿ ಇರುವುದರಿಂದ ತಾಂತ್ರಿಕ ತೊಂದರೆ ಉಂಟಾಗಿದೆ. ಪ್ರೌಢಶಾಲೆ ಮುಖ್ಯಶಿಕ್ಷಕರ ಹೆಸರಿನಲ್ಲಿ ಉತಾರ ಮಾಡಲು ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಬಾದಾಮಿ ಮತಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಇತ್ತ ಗಮನಹರಿಸಬೇಕು. ಅನುದಾನ ನೀಡಿ ಕಟ್ಟಡ ನಿರ್ಮಿಸಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.