
ಬಾಗಲಕೋಟೆ: ‘ಚುನಾವಣೆ ದಿನಾಂಕ ಪ್ರಕಟವಾದ ನಂತರ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುವುದು. ಒಳ್ಳೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು’ ಎಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಘೋಷಣೆಯಾದ ಬಳಿಕವೇ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಈ ಬಾರಿಯೂ ಹಾಗೆಯೇ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗುವುದು’ ಎಂದರು.
‘ಶಾಸಕರಾಗಿದ್ದ ಎಚ್.ವೈ. ಮೇಟಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಮೇಟಿ ಅವರ ಪುತ್ರ, ಪುತ್ರಿಯರನ್ನು ಕರೆದು ಮಾತನಾಡಿದ್ದೇನೆ. ಮೇಟಿ ಕುಟುಂಬದ ಸದಸ್ಯರಲ್ಲಿ ಯಾವುದೇ ತಿಕ್ಕಾಟ ಇಲ್ಲ. ಪುತ್ರ, ಪುತ್ರಿಯರ ಆಸಕ್ತಿ ಬೇರೆಯಾಗಿರಬಹುದು. ಅಭ್ಯರ್ಥಿ ಘೋಷಣೆ ನಂತರ ಎಲ್ಲರೂ ಒಟ್ಟಾಗಿ ಕೆಲಸ ಮಾಡಲಿದ್ದಾರೆ’ ಎಂದು ಹೇಳಿದರು.
‘ಮೇಟಿ ಅವರ ಪುತ್ರ, ಪುತ್ರಿಯರ ಬೆಂಬಲಿಗರು ಅಭಿಮಾನದಿಂದಾಗಿ ಫೇಸ್‌ಬುಕ್‌ನಲ್ಲಿ ಮೇಟಿ ಕುಟುಂಬದ ಬೇರೆ, ಬೇರೆ ಸದಸ್ಯರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಯಾವುದೇ ಹೇಳಿಕೆ ಹಾಕದಂತೆ ಕೆಪಿಸಿಸಿ ವತಿಯಿಂದ ಈಗಾಗಲೇ ಸೂಚಿಸಲಾಗಿದೆ’ ಎಂದರು.
‘ಉಪಚುಣಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ಕರೆದು ಮುಖಂಡರೊಂದಿಗೆ ಚರ್ಚಿಸಿದ್ದೇನೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ಪಕ್ಷದ ಎಲ್ಲ ಮುಖಂಡರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮುಖಂಡರಾದ ನಾಗರಾಜ ಹದ್ಲಿ, ಎಂ.ಬಿ. ಸೌದಾಗರ, ಪ್ರಕಾಶ ತಪಶೆಟ್ಟಿ, ಶ್ರೀನಿವಾಸ ಬಳ್ಳಾರಿ, ದಯಾನಂದ ಪಾಟೀಲ, ರಾಜು ಮನ್ನಿಕೇರಿ ಇದ್ದರು.
‘ಉಪಚುನಾವಣೆಯಲ್ಲಿ ಗೆಲುವು ಖಚಿತ’
‘ಐದು ಗ್ಯಾರಂಟಿಗಳ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಭರವಸೆ ನೀಡಿದ್ದ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ನಡೆದ ಮೂರೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.