ADVERTISEMENT

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ

ಫೆ.20ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:23 IST
Last Updated 3 ಫೆಬ್ರುವರಿ 2026, 6:23 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬಾಗಲಕೋಟೆ: ನಂಜುಂಡಪ್ಪ ವರದಿ ಸರಿಯಾಗಿ ಅನುಷ್ಠಾನಗೊಳಿಸದ ಪರಿಣಾಮ ಉತ್ತರ ಕರ್ನಾಟಕ ನಿರೀಕ್ಷಿತ ಅಭಿವೃದ್ಧಿ ಹೊಂದದೇ ಹೆಚ್ಚಿನ ಪ್ರಮಾಣದಲ್ಲಿ ಹಿಂದುಳಿದಿದೆ ಎನ್ನುವುದು ಗೋವಿಂದರಾವ್ ವರದಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ರಚನೆ ಆಗಬೇಕು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡರು ಆಗ್ರಹಿಸಿದರು.

ADVERTISEMENT

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ನಡುವೆ ಅಭಿವೃದ್ಧಿ ತಾರತಮ್ಯ ನಡೆಯುತ್ತಲೇ ಬಂದಿದೆ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.‌

ಇದೇ ವಿಚಾರವಾಗಿ ಈಗ ದಕ್ಷಿಣದಲ್ಲೂ ಸಹ ಪ್ರತ್ಯೇಕ ಬೆಂಗಳೂರು ರಾಜ್ಯದ ಬೇಡಿಕೆ ಹೆಚ್ಚಿದೆ. ಫೆ.20ರಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಿಯೋಗ ತೆರಳುತ್ತಿದೆ. ಭೇಟಿಯಾಗಿ ಎಲ್ಲ ವಿಷಯಗಳನ್ನು ತಿಳಿಸಲಿದ್ದೇವೆ ಎಂದರು.

ಗೋವಿಂದರಾವ್ ನೀಡಿರುವ ವರದಿಯಲ್ಲಿ ಹಿಂದುಳಿದ 20 ಜಿಲ್ಲೆಗಳಲ್ಲಿ 15 ಜಿಲ್ಲೆಗಳು ಉತ್ತರ ಕರ್ನಾಟಕದ್ದಾಗಿವೆ. ಉತ್ತರದ ಅಭಿವೃದ್ಧಿ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಇನ್ನೂ ತಾಳ್ಮೆ ವಹಿಸಿಕೊಂಡರೆ ನಿರುದ್ಯೋಗಿ ಯುವಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ವಿಳಂಬ ಮಾಡದೇ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಎಲ್ಲರೂ ಧ್ವನಿಗೂಡಿಸಬೇಕು. ಈ ಕುರಿತು 1.70 ಕೋಟಿ ಜನರ ಸಹಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಸಂಚಾಲಕ ಪ್ರಕಾಶ ಅಂತರಗೊಂಡ ಮಾತನಾಡಿ, ಬೆಂಗಳೂರ ಮತ್ತು ಮೈಸೂರ ಭಾಗಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಹಿಂದುಳಿದೆ. ಶೇ68ರಷ್ಟು ಜಲಸಂಪನ್ಮೂಲ ಹೊಂದಿದ್ದರೂ, ಉತ್ತರದ ಕೃಷ್ಣಾ, ಮಹದಾಯಿ, ನವಲಿ ಯೋಜನೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು.

ಬೆಂಗಳೂರು, ಬೇರೆಡೆ ಪ್ರತಿ ಎಕರೆಗೆ ₹16 ಕೋಟಿವರೆಗೂ ಪರಿಹಾರ ನೀಡಲಾಗಿದೆ. ಯುಕೆಪಿ ವಿಷಯ ಬಂದಾಗ ನ್ಯಾಯಾಲಯ ಆದೇಶದ ಪ್ರಕಾರವೂ ನೀಡಲು ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಜನಪ್ರತಿನಿಧಗಳ ನಿರ್ಲಕ್ಷದಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಕೈಗಾರಿಕೆಗಳ ಸ್ಥಾಪನೆಯೂ ಆಗುತ್ತಿಲ್ಲ ಎಂದರು.

ಮುಖಂಡರಾದ ಎ.ಎ.ದಂಡಿಯಾ, ಬಸವರಾಜ ಗವಿಮಠ, ರವಿ ಕುಮಟಗಿ ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಈ ಭಾಗದ ಜನಪ್ರತಿನಿಧಿಗಳ ಸ್ಪಷ್ಟ ಮಾರ್ಗಸೂಚಿ ಇಲ್ಲ. ಕೈಗಾರಿಕೆಗಳ ಆರಂಭವಾಗುತ್ತಿಲ್ಲ. ಅನ್ಯಾಯದ ಬಗ್ಗೆ ಧ್ವನಿ ಎತ್ತದಿದ್ದರೆ, ಇದು ಹೀಗೆಯೇ ಮುಂದುವರೆಯುತ್ತದೆ. ಪ್ರತ್ಯೇಕ ರಾಜ್ಯ ಅನಿವಾರ್ಯವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.