
ಹುನಗುಂದ: ನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರು ಕೆಲಸ ಮಾಡಿದರೂ ಕಳೆದ ಆರು ತಿಂಗಳಿನಿಂದ ವೇತನ ನೀಡಲು ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ನಿರ್ಲಕ್ಷ್ಯ ಹಾಗೂ ಅವರ ಕಾರ್ಯ ವೈಖರಿ ಖಂಡಿಸಿ ಶನಿವಾರ ತಾಲ್ಲೂಕಿನ ಇದ್ದಲಗಿ ಗ್ರಾಮದ ನೂರಾರು ನರೇಗಾ ಕೂಲಿ ಕಾರ್ಮಿಕರು ಹತ್ತಾರು ಟ್ರ‍್ಯಾಕ್ಟರ್ ಗಳಲ್ಲಿ ಆಗಮಿಸಿ ಧನ್ನೂರ ಗ್ರಾಮ ಪಂಚಾಯಿತಿ ಎದುರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಪ್ರತಿಭಟನಾ ನಿರತ ಶರಣಪ್ಪ ಮುಳ್ಳೂರ ಮಾತನಾಡಿ, ‘ಏಪ್ರಿಲ್ ತಿಂಗಳಲ್ಲಿ ಮಾಡಿರುವ ಒಂದು ಕೆಲಸಕ್ಕೆ ಮೂರು ಬಾರಿ ಎನ್ಎಂಆರ್ ಜೀರೋ ಮಾಡಿದ್ದು, ಇದರಿಂದ 30ಕ್ಕೂ ಹೆಚ್ಚು ಜನ ಕೂಲಿ ಕಾರ್ಮಿಕರು ಮಾಡಿದ ಕೆಲಸಕ್ಕೆ ವೇತನ ಇಲ್ಲದೇ ನಿತ್ಯ ಸಂಕಷ್ಟ ಪಡುವಂತಾಗಿದೆ. ಒಂದು ಕೆಲಸಕ್ಕೆ ಆರು ತಿಂಗಳಲ್ಲಿ ಮೂರು ಬಾರಿ ಎನ್ಎಂಎಎಸ್ ಮಾಡಿಸಿದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ವೇತನ ಆಗುತ್ತಿಲ್ಲ’ ಎಂದರು.
‘ಅಧಿಕಾರಗಳ ನಿರ್ಲಕ್ಷ್ಯಕ್ಕೆ ಕಾರ್ಮಿಕರು ನಿತ್ಯ ಕೃಷಿ ಕೆಲಸ ಬಿಟ್ಟು ಮತ್ತೆ ಎನ್ಎಂಎಎಸ್ ಮಾಡಿದರೂ ವೇತನ ಆಗುತ್ತೇ ಎನ್ನುವ ಗ್ಯಾರಂಟಿ ಇಲ್ಲದಂತಾಗಿದೆ. ಪದೇ ಪದೆ ಯಾಕೆ ಎನ್ಎಂಆರ್ ಶೂನ್ಯ ಆಗುತ್ತೇ ಅದಕ್ಕೆ ಕಾರಣ ಕೇಳಿದರೇ ತಾಂತ್ರಿಕ ದೋಷ ಮತ್ತು ಭಾವಚಿತ್ರ ಮ್ಯಾಚ್ ಆಗುತ್ತಿಲ್ಲ ಎನ್ನುತ್ತಾರೆ. ನಮ್ಮ ಬೇಡಿಕೆಗಳು ಈಡೇರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮುಖಂಡೆ ಮೀನಾಕ್ಷಿ ಗಂಜೀಹಾಳ ಮಾತನಾಡಿ, ‘ನಾವು ಮತ್ತೆ ಎನ್ಎಂಎಎಸ್ ಮಾಡಲು ಸಿದ್ದರಿಲ್ಲ. ಶೂನ್ಯವಾಗಿರುವ ಎಲ್ಲಾ ವೇತನವನ್ನು ಪಿಡಿಒ ಬರೆಸಬೇಕು ಎಂದು ಪಟ್ಟು ಹಿಡಿದರು.
ಕೂಲಿ ಕಾರ್ಮಿಕರ ಮುಖಂಡರಾದ ಮಹಾಂತೇಶ ಹೊಸಮನಿ, ಯಮನೂರ ಮಾದರ, ಕಲ್ಲಪ್ಪ ಆನೇಹೊಸೂರ, ಶರಣಪ್ಪ ಚಿಕ್ಕೋಡಿ, ಬಸವರಾಜ ಮುಳ್ಳೂರ, ಪಕೀರಪ್ಪ ಅಡಿಹಾಳ, ಶರಣಯ್ಯ ಕಂತಿಮಠ, ಭೀಮಪ್ಪ ಪೂಜಾರಿ ಇದ್ದರು.
‘ತಾಂತ್ರಿಕ ದೋಷ ಮತ್ತು ಎನ್ಎಂಎಎಸ್ ಮ್ಯಾಚಿಂಗ್ ಸಮಸ್ಯೆಯಿಂದ ವೇತನ ಆಗದೆ ತೊಂದರೆಯಾಗಿದ್ದು, 15 ದಿನಗಳೊಳಗಾಗಿ ಪರಿಹರಿಸುವ ಕೆಲಸ ಮಾಡಲಾಗುವುದು. ಜಾಬ್ ಕಾರ್ಡ್ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವಂತೆ ಪಿಡಿಒಗೆ ಸೂಚಿಸಲಾಗುವುದು’ ಎಂದು ಹುನಗುಂದ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹಾಂತೇಶ ಚಲವಾದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.