ADVERTISEMENT

ಜಾತ್ರೆಯಲ್ಲಿ ಜೋಡೆತ್ತುಗಳ ಬೆಲೆ ₹ 20 ಲಕ್ಷ

ಜಾನುವಾರು ಪ್ರದರ್ಶನ, ಮಾರಾಟ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 15:40 IST
Last Updated 20 ಜನವರಿ 2025, 15:40 IST
ಬಾದಾಮಿ ಎಪಿಎಂಸಿ ಆವರಣದಲ್ಲಿ ನಡೆದ ಜಾನುವಾರು ಜಾತ್ರೆಯಲ್ಲಿ ಜಾನುವಾರು ಪ್ರದರ್ಶನ ಮತ್ತು ಮಾರಾಟದಲ್ಲಿ ರೈತರ ಸಂಭ್ರಮ.
ಬಾದಾಮಿ ಎಪಿಎಂಸಿ ಆವರಣದಲ್ಲಿ ನಡೆದ ಜಾನುವಾರು ಜಾತ್ರೆಯಲ್ಲಿ ಜಾನುವಾರು ಪ್ರದರ್ಶನ ಮತ್ತು ಮಾರಾಟದಲ್ಲಿ ರೈತರ ಸಂಭ್ರಮ.   

ಬಾದಾಮಿ: ಬನಶಂಕರಿ ದೇವಾಲಯದ ರಸ್ತೆಯ ಎಪಿಎಂಸಿ ಆವರಣದಲ್ಲಿ ಜಾನುವಾರು ಜಾತ್ರೆಯಲ್ಲಿ ಸೋಮವಾರ ಪ್ರದರ್ಶನ ಮತ್ತು ಮಾರಾಟ ಭರ್ಜರಿಯಾಗಿತ್ತು.

ಬನಶಂಕರಿದೇವಿ ಜಾತ್ರೆಯ ಅಂಗವಾಗಿ ಪ್ರತಿವರ್ಷ ಸ್ಥಳೀಯ ಜಾತ್ರಾ ಸಮಿತಿ, ಎಪಿಎಂಸಿ ಮತ್ತು ಪಶುಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಐದು ದಿನಗಳವರೆಗೆ ಜಾನುವಾರು ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರು ಮತ್ತು ಬೇರೆ ಜಿಲ್ಲೆಗಳಿಂದ ರೈತರು ತಮ್ಮ ಜಾನುವಾರು ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿರುವರು.

ADVERTISEMENT

ರೈತರು ಹಾಲಹಲ್ಲು ಹೋರಿ, ಎತ್ತು ಮತ್ತು ಗೋವುಗಳ ವೀಕ್ಷಣೆಗೆ ಮತ್ತು ಖರೀದಿಗೆ ತಂಡೋಪತಂಡವಾಗಿ ಆಗಮಿಸಿದ್ದು ಕಂಡು ಬಂದಿತು.

ಅಂದಾಜು ಐದು ಸಾವಿರಕ್ಕೂ ಅಧಿಕ ಜಾನುವಾರುಗಳನ್ನು ರೈತರು ತೆಗೆದುಕೊಂಡು ಬಂದಿದ್ದರು ಎಂದು ಎಪಿಎಂಸಿಯಿಂದ ಅಂದಾಜಿಸಲಾಗಿದೆ.

‘ಈ ವರ್ಸ ಮಳಿ, ಬೆಳಿ ಚೊಲೊ ಆಗೈತ್ರಿ. ರೈತರು ಖರೀದಿಗೆ ಬಹಳ ಜನ ಬಂದಾರ, ವ್ಯಾಪಾರ ಚೊಲೊ ಐತ್ರಿ’ ಎಂದು ಬೇಲೂರ ಗ್ರಾಮದ ಪರಸಪ್ಪ ಹೇಳಿದರು.

ಕಗಲಗೊಂಬ ಗ್ರಾಮದ ಬಸಪ್ಪ ಕೆಂಗಾರ ರೈತನ ಜೋಡೆತ್ತುಗಳು ಜಾತ್ರೆಯಲ್ಲಿ ಆಕರ್ಷಕವಾಗಿದ್ದವು. ರೈತ ಎತ್ತುಗಳನ್ನು ಚೆನ್ನಾಗಿ ಜೋಪಾನ ಮಾಡಿದ ಬಗ್ಗೆ ರೈತರು ನೋಡಿ ಖುಷಿ ಪಟ್ಟರು. ಜೋಡೆತ್ತಿನ ಬೆಲೆ ₹  20 ಲಕ್ಷ ಎಂದು ರೈತ ಬಸಪ್ಪ ಹೇಳಿದರು.

ಎತ್ತುಗಳ ಅಲಂಕಾರಕ್ಕೆ ಕೊರಳಗೆಜ್ಜೆ ಸರ, ಕೋಡೆಣಸು, ಜೂಲ, ಬಣ್ಣದ ಮಾಲೆ ಮತ್ತಿತರ ವಸ್ತುಗಳ ಹಗ್ಗದ ಅಂಗಡಿಯಲ್ಲಿ ರೈತರು ಖರೀದಿ ನಡೆಸಿದ್ದರು.

ಬಹುಮಾನ ವಿತರಣೆ ಇಂದು: ಎಪಿಎಂಸಿ ಆವರಣದಲ್ಲಿ ಜ. 21 ರಂದು ಸಂಜೆ 5 ಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಉತ್ತಮ ತಳಿ ರಾಸುಗಳಿಗೆ ಬಹುಮಾನ ವಿತರಿಸುವರು ಎಂದು ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ ತಿಳಿಸಿದ್ದಾರೆ.

ಬಾದಾಮಿ ತಾಲ್ಲೂಕಿನ ಕಗಲಗೊಂಬ ಗ್ರಾಮದ ರೈತ ಬಸಪ್ಪನ ರೂ. 20 ಲಕ್ಷ ಮೌಲ್ಯದ ಜೋಡೆತ್ತುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.